Wednesday, February 23, 2011

ಆಲಾಪ್‌ ಗೆ ದನಿಗೂಡಿಸುತ್ತಿದ್ದ ಅವಳು ಹೋದಳೆಲ್ಲಿ?

      ಅಪ್ಪಾಜಿ-ಅಮ್ಮ ಇರೋದು ಧಾರವಾಡದಲ್ಲಿ. ಅಣ್ಣ, ನಾನು ಬೆಂಗಳೂರಿನಲ್ಲಿ ಮನೆ ಮಾಡ್ಕೊಂದೀವಿ. ಅಕ್ಕ-ಭಾವನ ಮನೆ ನಮ್ಮನೆ ಮುಂದಿನ ರೋಡ್ ನಲ್ಲಿ. ಅಮ್ಮ ದಿನಾ ಸಂಜೆ ಫೋನ್ ಮಾಡಿ ಎಲ್ಲರ ಆರೋಗ್ಯ-ಕಷ್ಟ-ಸುಖದ ಬಗ್ಗೆ ವಿಚಾರಿಸ್ತಾರೆ. ಹೀಗೆ ಮಾತಾಡ್ತಾ ಮಾತಾಡ್ತಾ 'ಅಮ್ಮ ಪೀಲೂ ಏನ್ಮಾಡ್ತಿದೆ, ಹೇಗಿದೆ ಅಂತ ಸಹಜವಾಗಿ ನಮ್ಮ ಬಾಯಲ್ಲಿ ಬಂದೇ ಬಿಡುತ್ತದೆ. ''ಅಯ್ಯೋ ಪೀಲೂ ಪೀಲೂ ಅನ್ನೂ.. ಆತು, ಹೋತ ನೊಡ್ವಾ ನಮ್ಮನ್ ಬಿಟ್.. ಆದ್ರೂ ಹಂಗ ಅನ್ಸೂದೇ ಇಲ್ಲ ನೊಡು. ಇಲ್ಲೇ ಹೊರಗ ಆಡಾಕ ಹೋಗೇತಿ ಈಗ ಬರ್ತೇತೆನೋ ಅಂತ ಅನಸ್ತೇತಿ, ಏನ್ಮಾಡೂದು ಹಂ..." ಅಮ್ಮ ನಿಟ್ಟುಸಿರು ಬಿಡ್ತಾ ಇಬ್ಬರ ಕಣ್ಣು ಹನಿಗೂಡಿರ್ತಾವೆ.
     'ಪೀಲೂ' ನಮ್ಮ ಪ್ರೀತಿಯ ಮುದ್ದಾದ ನಾಯಿ, ನಮ್ಮ ಮನೆಯ ಮಗಳು. ಬೆಕ್ಕು,ನಾಯಿ,ಪ್ರಾಣಿ-ಪಕ್ಷಿಗಳೆಂದ್ರೆ ನಮಗೆಲ್ಲ ತುಂಬಾ ಇಷ್ಟ. ಸ್ವಂತ ಮನೆಗೆ ಬಂದ್ಮೇಲೆ ನಾವು ದಿನಾ, ಬೆಕ್ಕು -ನಾಯಿ ಮರಿ ತರೋಣ ಅಪ್ಪಾಜಿ... ಅಂತಾ ಒಂದೇ ಸಮನೆ ಪೀಡಿಸ್ತಾ ಇದ್ವಿ.. ಅಪ್ಪಾಜಿ ತಮ್ಮ ಕೆಲಸದ ಬಿಜಿಯಲ್ಲಿ ಹುಂ ಹುಂ ಅಂತ ವಿಚಾರವನ್ನು ಪೋಸ್ಟ್ ಪೋನ್ ಮಾಡ್ತಾನೇ ಇರ್ತಿದ್ರು.
       ಒಂದಿನ ಬೆಳಿಗ್ಗೆ ಅಮ್ಮ ಬಾಗಿಲಿಗೆ ರಂಗೋಲಿ ಹಾಕೋವಾಗ ಒಂದು ಮುದ್ದಾದ ನಾಯಿ ಮರಿ ಅಮ್ಮನ ಸೀರೆ ಸೆರಗನ್ನು ಎಳೀತಿತ್ತಂತೆ. ಅಮ್ಮನಿಗೆ ಅದ್ನ ನೋಡಿ ಏನೋ ಒಂಥರ ಖುಷಿಯಾಗಿ ತಲೆ ಸವರ್ತಾ ಎತ್ಕೊಂಡು  ' ಶ್ರೀ, ಪಮ್ಮು, ಲಿಲ್ಲಿ... ನೋಡ್ರಿಲ್ಲೇ ಯಾರ್ ಬಂದಾರು ಅಂತ ಅಮ್ಮ ಒಳಗಡೆ ಬಂದ್ರು. ಅದರ ಕುಂಯ್.. ಕುಂಯ್.. ಶಬ್ದ ಕೇಳಿದ್ದೇ ತಡ ಕುಂಭಕರ್ಣನಂತಿದ್ದ ನನ್ನ ಅಣ್ಣ ಅವತ್ತು 6ಗಂಟೆಗೇನೇ ಎದ್ದುಬಿಟ್ಟಿದ್ದ...! ನಾನು ಅಕ್ಕ ಸಿಕ್ಕಾಪಟ್ಟೆ ಖುಷಿಯಾಗಿ ಅದರ ಸ್ನಾನದ ತಯಾರಿ ಶುರು ಮಾಡೇ ಬಿಟ್ಟಿದ್ವಿ... ಹಸಿದುಕೊಂಡಿರೋ ಕಂದಮ್ಮನಿಗೆ ಅಮ್ಮ ಬ್ರೆಡ್ ತಿನ್ಸಿದ್ರು.
    ಡಿ.ಲಿಟ್ ರಿಸರ್ಚ್ ವರ್ಕ್ ನಲ್ಲಿ ಬಿಜಿಯಾಗಿದ್ದ ಅಪ್ಪಾಜಿ ರೂಮಿನಿಂದ ಎದ್ದು ಬಂದು,'ಏನ್ಮಾಡಾತೀರಿ ಎಲ್ಲಾರೂ.... ಏನ್ ಗದ್ಲ್ ಇದು...' ' ಅಪ್ಜೀ... ನೊಡ್ರಿಲ್ಲೇ.. ಎಷ್ಟ್ ಕ್ಯೂಟ್ ಕ್ಯೂಟ್ ಐತ್ರಿ ನಾಯಿ ಮರಿ, ಇದು ಇಲ್ಲೇ ಇರ್ತೆತ್ರಿ ' ಅಂತ ನಾವು ಕುಣೀತಾ ಇದ್ವಿ... ಆದ್ರೆ ಅಪ್ಪಾಜಿ ಬೇಡ ಇದು ಸಾದಾ ನಾಯಿ.. ಯಾರೂ ಹೆದ್ರಂಗಿಲ್ಲ ನಾನು ಒಂದ್ ಮುಧೋಳ ನಾಯಿ ತರ್ತೇನಿ ಅಂದ್ಬಿಟ್ರು... :(. ಅದಕ್ಕೆ ನನ್ನ ತರಲೆ ಅಣ್ಣ, ' ಇಲ್ರಿ ಅಪ್ಜೀ.. ಇದು ಭಾಳ್ ಶಾಣ್ಯಾ ಐತ್ರಿ... ನೋಡ್ರಿ ಈಗ ಮಮ್ಮಿ ಶೇಕ್ ಹ್ಯಾಂಡ್ ಮಾಡಾಕ್ ಕಲ್ಸೀದ್ರು, ಅದಕ್ಕೆಲ್ಲಾ ಗೊತ್ತಾಗ್ತೇತಿ ನೋಡ್ರಿ... ನಾ ಅದಕ್ಕ ಎಲ್ಲಾ ಕಲಸ್ತೇನ್ರಿ, ಕಂಪೌಂಡ್ ಹತ್ತಾಕೂ ಕಲಸ್ತೇನ್ರಿ ಅಂತ ಇನ್ನೂ ಎನೇನೋ ಹೇಳ್ತಾ ಹೇಳ್ತಾ ಸಿಕ್ಕಾಪಟ್ಟೆ ಎಗ್ಸೈಟ್ ಆಗ್ಬಿಟ್ಟಿದ್ದ...! ಅಮ್ಮ ಕೂಡ ನಮಗೆ ಸಪೋರ್ಟ್ ಮಾಡ್ತಾ ' ಇರ್ಲಿ ಬಿಡ್ರಿ.. ಏನೋ ಮಕ್ಳು ಖುಷಿ ಆಗ್ಯಾವು.. ಮತ್ತ... ಇದು ನೋಡಾಕು ಛಂದ್ ಐತಿ ಶಾಣ್ಯಾನೂ ಐತಿ' ಅಂದಿದ್ಕೆ ಅಪ್ಪಾಜಿ ' ಹುಂ ಆತ್ ಆತು ನಾಳೆ ಹೋಗಿ ಅದಕ್ಕೊಂದು ವ್ಯಾಕ್ಸಿನೇಶನ್ ಹಾಕಿಸ್ಕೊಂಡು ಬರ್ತೇನಿ' ಅಂತ ಅಪ್ಪಾಜಿ ಗ್ರೀನ್ ಸಿಗ್ನಲ್ ಕೊಟ್ಬಿಟ್ರು.. :)
             
       ಅಕ್ಕ ತನಗಿಷ್ಟವಾದ ರಾಗದ ಹೆಸರಿನಿಂದ ಮರಿಗೆ 'ಪೀಲೂ' ಅಂತ ನಾಮಕರಣ ಮಾಡಿದ್ಲು. (ಜೊತೆಗೆ ಅದಕ್ಕೆ ಸುಂದರಿ ಅಂತಾನೂ ಹೆಸರಿಟ್ಟಿದ್ವಿ) ನಮ್ಮ ಹಳ್ಳಿಯಲ್ಲಿ ಬೆಕ್ಕುಗಳ ಜೊತೆಗೆನೇ ಹುಟ್ಟಿ, ಬೆಳೆದು, ಆಟ ಆಡಿದ ನಮಗೆ ಪೀಲೂನ ಸಾಕೋದು,ಬೆಳೆಸೋದು,ಮೆಂಟೇನ್ ಮಾಡೋದು ಕಷ್ಟ ಅನಿಸ್ಲಿಲ್ಲ. ಪೀಲೂ ಬರುವ ಮುಂಚೆ ಹೊಸಮನೆಗೆ ಬಂದ್ಮೇಲೆ ಬೇರೆ ನಾಯಿಗಳ ಕಾಟದಿಂದ ನಾವು ಎರಡು ಮುದ್ದಾದ ಬೆಕ್ಕಿನ ಮರಿಗಳನ್ನ ಕಳೆದುಕೊಂಡಿದ್ವಿ :(.. ಹಾಗಾಗಿ ಪೀಲೂಗೆ ಸಿಕ್ಕಾಪಟ್ಟೆ ಪ್ರೊಟೆಕ್ಷನ್... (ಅಮ್ಮನೂ ಟೀಚರ್‌ ಆದ್ದರಿಂದ ಬೆಳಿಗ್ಗೆಯಿಂದ ಸಂಜೆ ತನಕ ಮನೇಲಿ ಯಾರು ಇರ್ತಿರ್ಲಿಲ್ಲ). ಒಂದು ತಿಂಗಳಾಯ್ತು ನೋಡಿ... ರಿಂಗ್ ಮಾಸ್ಟರ್ ನನ್ನ ಅಣ್ಣ ನಮ್ಮ ಪೀಲೂನ ಫುಲ್ ರೆಡಿ ಮಾಡ್ಬಿಟ್ಟಿದ್ದ...! ಆದ್ರೆ ಆರು ತಿಂಗಳಾದ್ರೂ ಪಿಲೂನ ಎತ್ತರ 1.5 ಅಡಿ ಮಾತ್ರ...! ನಂತರ ಡಾಕ್ಟರ್ ಗೆ ವಿಚಾರಿಸಿದ ಮೇಲೆ ಗೊತ್ತಾಯ್ತು ಅದು 'ಮುಧೋಳ ಹಾಗೂ ಪಮೇರಿಯನ್ ಕ್ರಾಸ್ ಬ್ರೀಡ್' ಹಾಗಾಗಿ ಅದರ ಹೈಟ್ ಅಷ್ಟೇ ಅಂತಾ.... ಆದರೂ ಅಣ್ಣ ಆರಡಿ ಕಂಪೌಂಡ್ ಜಿಗಿಯುವುದನ್ನು ಕಲಿಸೋದ್ರಲ್ಲಿ ಸಫಲನಾಗಿದ್ದ... :)
      
       ಪೀಲೂ ತುಂಬಾ ತುಂಬಾ ಜಾಣೆ ಹಾಗೂ ಸೆನ್ಸಿಟಿವ್ ಜೊತೆಗೆ ಮಕ್ಕಳ ಹಾಗೆ ಹಟ ಕೂಡ. ಅಪ್ಪಾಜಿ-ಅಮ್ಮ ಸ್ಕೂಲ್ ಗೆ ಹೋಗುವ ಮುಂಚೆ ದಿನಾಲೂ ಗಾಡಿ ಮೇಲೆ ಒಂದು ರೌಂಡ್ ಹಾಕಿಸ್ಲೇಬೇಕಿತ್ತು... ಮತ್ತೆ ಅಮ್ಮನ ಪಕ್ಕಕ್ಕೆ ಮಲಗೋದಕ್ಕಂತೂ ಸಿಕ್ಕಾಪಟ್ಟೆ ಜಗಳ... ಅಮ್ಮನ ಒಂದು ಬದಿಗೆ ನಾ ಮಲಗಿದ್ರೆ, ತಾನೂ ಅಮ್ಮನ ಇನ್ನೊಂದು ಬದಿಗೆ ಅವರ ಕೈಮೇಲೆ ತಲೆ ಇಟ್ಟು ಮಲಗಬೇಕು... ಅಕಸ್ಮಾತ್ ಅಕ್ಕ ನಾನೂ ಇಬ್ಬರೂ ಅಮ್ಮನೊಟ್ಟಿಗೆ ಮಲಗಿದ್ರೆ... ಶುರು ಆಯ್ತು ಜಗಳ... ಹೇಗಾದ್ರೂ ಸಂದಿಯಲ್ಲಿ ಜಾಗ ಮಾಡ್ಕೊಂಡು ಮಲಗ್ತಿದ್ಲು...! ಅಷ್ಟೊಂದು ಜಲಸಿ...! 
   ದಿನಾಲು ಅಮ್ಮ ಅಥವಾ ಅಪ್ಪಾಜಿ 'ಪೀಲೂ ಅಕ್ಕನ ಎಬ್ಬಿಸಿಕೊಂಡು ಬಾ ಅಪ್ಪಿ' ಹೇಳ್ತಿದ್ರೆ ಸಾಕು... ನನ್ನ ಅಂಡರ್ ಗ್ರೌಂಡ್ ರೂಮಿನ ಆರು ಸ್ಟೆಪ್ಸ್ ನ್ನು ಪುಟು ಪುಟು ಅಂತ ಇಳಿದು ನನ್ನ ಕೈಯನ್ನು ತನ್ನ ಕೈಯಿಂದ ಎಳೆದು ಅಥವಾ ತನ್ನ ಮುಖವನ್ನು ನನ್ನ ಕಾಲಿಗೆ ಸವರಿ ಎಬ್ಬಿಸ್ತಿದ್ಲು. ಆದ್ರೆ ನಾನು ಓದ್ತಿದ್ರೆ ಒಂಚೂರು ಡಿಸ್ಟರ್ಬ್ ಮಾಡ್ತಿರ್ಲಿಲ್ಲ...ನೋಡಿ ಹಾಗೆ ಹೋಗಿ ಬಿಡ್ತಾ ಇದ್ಲು...! ಮನೆಯಲ್ಲಿ ಯಾರಿಗಾದ್ರೂ ಹುಷಾರಿಲ್ಲ ಅಂದ್ರೆ ತುಂಬ ಅಪ್ಸೆಟ್ ಆಗಿ ಅವರನ್ನು ಬಿಟ್ಟು ಬರ್ತಾನೇ ಇರ್ಲಿಲ್ಲ... ಅದ್ರಲ್ಲೂ ಅಪ್ಪಾಜಿ-ಅಮ್ಮನಿಗೆ ಹುಷಾರಿಲ್ಲ ಅಂದ್ರೆ ಅವಳ ಕಣ್ಣಲ್ಲೂ ನೀರು....! ಎಲ್ಲ ಮಾತು- ಸೂಕ್ಷ್ಮ ಅವಳಿಗೆ ಅರ್ಥ ಆಗ್ತಿತ್ತು...!

       ಅಕ್ಕ ಸಂಗೀತ ಅಭ್ಯಾಸ ಮಾಡೋವಾಗ್ಲೆಲ್ಲ ಪೀಲೂ ನಮ್ಮ ಜೊತೆಗೆ ಕೂತ್ಕೊಳ್ತಾ ಇತ್ತು. ಹೀಗೆ ಒಂದಿನ ಅಕ್ಕ ಚೀಜ್ ಹಾಡೊವಾಗ ಆಲಾಪ ಮಾಡ್ತಿದ್ಲು... ಪೀಲೂ ಅದೆಷ್ಟು ಇನ್ವಾಲ್ವ ಆಗಿತ್ತಂದ್ರೆ ಅವಳ ಆಲಾಪ ಕೇಳಿ ತಾನೂ ಅವಳ ಜೊತೆಗೆ ಓ.... ಅಂತ ದನಿಗೂಡ್ಸೋದಕ್ಕೆ ಶುರು ಮಾಡಿಬಿಟ್ಟಿತ್ತು...!!! ನಮಗೆಲ್ಲ ಆಶ್ಚರ್ಯ...!!! ಸಂಗೀತ ಅಭ್ಯಾಸಕ್ಕೆಂದು ಮಕ್ಕಳು ಬರ್ತಿದ್ರು ಅವರ ಗಲಾಟೆಗೆ ಪೀಲೂನ ಗದರಿಕೆ ಸಾಕಾಗ್ತಿತ್ತು...!

       ಸಾಮಾನ್ಯವಾಗಿ ಎಲ್ಲ ನಾಯಿಗಳ ಹಾಗೆ ಪೀಲೂ ಕೂಡ ಅಪರಿಚಿತರನ್ನು ಗೇಟ್ ಒಳಗಡೆ ಸೇರಿಸ್ತಿರ್ಲಿಲ್ಲ... ಹಾಗೆನೇ ಯಾರೋ ಕೆಲಸದವ್ರು ನೀಟಾಗಿ ಡ್ರೆಸ್ ಮಾಡ್ಕೊಂಡಿರ್ಲಿಲ್ಲ ಅಂದ್ರೆ ನಾವಾಗೇ ಬಿಡಪ್ಪಿ ಅವ್ರು ನಮ್ಮವರೆ ಅಂದ್ರೂ ಬಿಡ್ತಿರ್ಲಿಲ್ಲ...! ಅಷ್ಟೊಂದು ನಿಟ್ ನೆಸ್...! ಬಟ್ ಅವಳು ಮನೆಗೆ ಬಂದವರಿಗೆಲ್ಲ ಶೇಕ್ ಹ್ಯಾಂಡ್ ಮಾಡೋಕೆ ಹೋಗ್ತಿದ್ಲು ಆದ್ರೆ ಜನ 'ನಾಯಿ' ಅಂತ ಭಯ ಪಡ್ತಿದ್ರು ಅಷ್ಟೇ... ಪೀಲೂ ಎಲ್ಲರ ಜೊತೆಗೂ ಬೇಗ ಫ್ರೆಂಡ್ ಶಿಪ್ ಮಾಡ್ಕೋತಿತ್ತು. ಮನೆಗೆ ಬಂದವರೆಲ್ಲ ಪೀಲೂನ ಗುಣಗಾನ... ಅದನ್ನು ಕೇಳಿಸಿಕೊಂಡು ಅವ್ಳು ಸಿಕ್ಕಾಪಟ್ಟೆ ಖುಷಿಯಿಂದ ಎಲ್ಲರಿಗೂ ಶೇಕ್ ಹ್ಯಾಂಡ್ ಮಾಡಿದ್ದೇ ಮಾಡಿದ್ದು... ಊರಿಂದ ಬಂದೋವ್ರು ವಾಪಸ್ ಹೊಗೋವಾಗ ಅವರ ಹೊಟ್ಟೆ ಮೇಲೆ ತನ್ನ ಮುಂದಿನ ಎರಡೂ ಕೈಗಳನ್ನಿಟ್ಟು ಮುಖ ಮುಚ್ಚಿಕೊಂಡು ಬೇಜಾರ್ ಮಾಡ್ಕೋಳ್ತಾ ಇದ್ಲು... ಮನೇಲಿ ಯಾರಾದ್ರು ಬೈದ್ರೆ ಎಷ್ಟೋ ಸಲ ಊಟ ಬಿಟ್ಟಿದ್ದೂ ಉಂಟು...!
        ಒಂದಿನ ನಮ್ಮ ದೊಡ್ಡಪ್ಪ ಬಂದಾಗ, 'ಪೀಲೂ ದೊಡ್ಡಪ್ಪಗೆ ನಮಸ್ಕಾರ ಮಾಡು' ಅಂದಾಗ ತನ್ನ ಎರಡೂ ಮುಂಗೈಯನ್ನು ಚಾಚಿ ಕೂತ್ಕೊಂಡು ಅವರ ಕಾಲಿಗೆ ತಲೆ ತಾಕಿಸಿ ನಮಸ್ಕಾರ ಮಾಡಿದ್ದನ್ನು ಕಂಡು ಅವರೂ ಬೆರಗಾಗಿ ಬಿಟ್ಟಿದ್ರು...!

       ಪೀಲೂ ಬಂದು ಎರಡು ವರ್ಷಕ್ಕೆ ಮೂರು ಮುದ್ದಾದ ಮರಿಗಳನ್ನು ಹಾಕಿತ್ತು. ಆಗ ನಾನು ನವೋದಯದಿಂದ ಅಕ್ಟೋಬರ್‌ ರಜೆಗೆ ಮನೆಗೆ ಬಂದಿದ್ದೆ. ಅಪ್ಪಾಜಿ ಅಕ್ಕನ 'ಮ್ಯುಸಿಕಲ್ ವರ್ಕ್ ಶಾಪ್'ಗೆಂದು ಅಸ್ಸಾಂಗೆ ಕರೆದುಕೊಂಡು ಹೋಗಿದ್ರು. ಮರಿ ಹಾಕೋವಾಗ ಪೀಲೂನ ಸಂಕಟ ನೋಡಿ ಅಮ್ಮ ನಾನು ಸಿಕ್ಕಾಪಟ್ಟೆ ಟೆನ್ಸ್ ಆಗಿದ್ವಿ ಬಟ್ ಸ್ವಲ್ಪ ಹೊತ್ತಾದ್ಮೇಲೆ ಸುಧಾರಿಸಿಕೊಂಡಿದ್ದು ನೋಡಿ ನಮಗೂ ಸಮಾಧಾನ ಆಯ್ತು. ಅಕ್ಕನಿಗೆ ಮುದ್ದು ಮರಿಗಳ ವಿಷಯ ತಿಳಿಸೋಣ ಅಂದ್ರೆ ಆಗ ಮೊಬೈಲ್ ಇರ್ಲಿಲ್ಲ... ಬಟ್ ಅವತ್ತೇ ರಾತ್ರಿ ಅಪ್ಪಾಜಿ ಫೋನ್ ಮಾಡಿದ್ರು... ಅಕ್ಕನಿಗಂತೂ ನಾನು ಹೇಳೋದನ್ನ ಕೇಳಿ ಯಾವಾಗ ವಾಪಸ್ ಬರ್ತೀನೋ ಅನ್ನೋ ಕುತೂಹಲ... (ಆದ್ರೆ ಅವರು ಬರೋಕೆ ಇನ್ನೂ 5ದಿನಗಳಾಗ್ತಿತ್ತು). ಅಪ್ಪಾಜಿ ಮರಿಗಳ ಪ್ರೊಟೆಕ್ಶನ್ ಗೆ ಒಂದಿಷ್ಟು ಟಿಪ್ಸ್ ಕೊಟ್ಟಿದ್ರು..
      
       ಸ್ವಲ್ಪ ದಿನಗಳ ನಂತರ ಮರಿಗಳನ್ನು ಬೇರೆಯವರು ಸಾಕೋದಕ್ಕೆ ಅಂತ ತಗೊಂಡೋದ್ರು. ಆದ್ರೆ ಪೀಲೂ ತುಂಬ ಲೋನ್ಲಿನೆಸ್ ಫೀಲ್ ಮಾಡೋಕೆ ಶುರು ಮಾಡ್ತು. ನಮಗೂ ಅದನ್ನು ನೋಡೋಕಾಗದೇ, ನಾನು ಅಕ್ಕ, ಬೆಕ್ಕಿನ ಮರಿ ತರುವ ಪ್ಲ್ಯಾನ್ ಮಾಡಿದ್ವಿ...! ಬೆಕ್ಕು-ನಾಯಿ ಹೊಂದಿಕೊಳ್ಳೋದಿಲ್ಲ ಬೇಡ ಅಂತ ಹೇಳಿದ್ರೂ ಕೆಳದ ನಾವು ಬೆಕ್ಕಿನ ಮರಿಯನ್ನು ತಂದೇ ಬಿಟ್ವಿ...!
  ಇನ್ನೊಂದು ರಾಗದ ಹೆಸರಿನಿಂದ ಬೆಕ್ಕಿನಮರಿಗೆ 'ಪೂರ್ವಿ' ಅಂತ ನಾಮಕರಣ ಮಾಡಲಾಯ್ತು. ಎರಡು ದಿನ ಇಬ್ಬರೂ ಗುರ್ ಪುರ್ ಅಂತ ಗಲಾಟೆ ಮಾಡಿದ್ರು ಬಟ್ ಪೀಲೂ ಬುದ್ಧಿವಂತೆ, ಸಮಾಧಾನದ ಹುಡುಗಿ. ಹಾಗಾಗಿ ಪೀಲೂಗೆ ಸಮಾಧಾನ ಹೇಳಿ ಪೀಲು ಬಳಿ ಪೂರ್ವಿಯನ್ನೂ ಬಿಡತಿದ್ವಿ. ನಿಜ ಹೇಳ್ಬೇಕಂದ್ರೆ ಪೂರ್ವಿ ಆಗಷ್ಟೇ ಕಣ್ಣು ತೆರೆದು ಇನ್ನೂ ಅಮ್ಮನ ಹಾಲು ಕುಡಿಯುವ 'ಹಸುಗೂಸು'...! ಪೀಲೂಗೂ ಮಕ್ಕಳನ್ನ ಮಿಸ್ ಮಾಡ್ಕೊಂಡ್ ಫೀಲಿಂಗ್, ಪೂರ್ವಿಗೂ ಅಮ್ಮನ ಮಿಸ್ ಮಾಡ್ಕೊಂಡ್ ಫೀಲಿಂಗ್... ಸೋ ಪೂರ್ವಿ ತಾನಾಗೇ ಪೀಲೂವಿನ ಬಳಿ ಹೋಗಿ ಹಾಲು ಕುಡಿಯುವುದನ್ನು ಅಭ್ಯಾಸ ಮಾಡಿಕೊಂಡಳು. ಎರಡೇ ದಿನಗಳಲ್ಲಿ ಇಬ್ಬರೂ ಹೊಂದಿಕೊಂಡು ಒಂದೇ ಚೇರ್ ನಲ್ಲಿ ರೆಸ್ಟ್ , ಒಂದೇ ಹಾಸಿಗೆಯಲ್ಲಿ ತಾಚಿ, ಒಂದೇ ತಟ್ಟೆಯಲ್ಲಿ ಊಟ...!!

       ಪೂರ್ವಿಯ ಚೇಷ್ಟೆಗೆ ಪೀಲೂನ ಗದರಿಕೆ, ಗಂಟೆಗಟ್ಟಲೆ ಚೆಲ್ಲಾಟ- ಪೂರ್ವಿ ದೂರದಿಂದ ಓಡಿ ಬಂದು ಪೀಲೂನ ಕತ್ತಿಗೆ ಜೋತು ಬಿಳೋದು, ಬಾಲದ ಜೊತೆಗೆ ಚೇಷ್ಟೆ ಮಾಡೊದು, ಸುಸ್ತಾದ ಮೇಲೆ ಪೀಲೂನ ಮಡಿಲಲ್ಲೇ ತನ್ನ ಪುಟಾಣಿ ಕೈಯನ್ನು ಹಾಕಿ ನಿಟ್ಟುಸಿರು ಬಿಡ್ತಾ ಮಲಗೋದು, ಅಕ್ವೇರಿಯಂನಲ್ಲಿದ್ದ ಮೀನುಗಳ ಓಡಾಟ ನೋಡಿ ಅವರಿಬ್ಬರ ಖುಷಿ, ಕೆಲವೊಮ್ಮೆ ಟ್ಯಾಂಕ್ ನಿಂದ ಹೊರ ತೆಗೆದ 'ಟೋಟು'(ಆಮೆ) ವನ್ನು ಮುದ್ದಾಡೋದು... ಹೀಗೆ ಅವುಗಳ ಎಂಜಾಯ್ ಮೆಂಟ್, ಖುಷಿ... ಪಿಕ್ಚರ್ ಯಾವತ್ತು ಮಾಸಲ್ಲ...!

       ಪೂರ್ವಿ ಕೂಡ ಪಿಲೂ ಜೊತೆಗೆ ವಾಕಿಂಗ್ ಬರ್ತಿತ್ತು. ಆದ್ರೆ ಸ್ವಲ್ಪ ದೂರ ಬಂದು ಮನೆಗೆ ವಾಪಸ್ ಆಗಿ ಬಿಡ್ತಿತ್ತು. ಅದು ಮನೆ ತಲುಪುವವರೆಗೂ ಪೀಲೂ ಅಲ್ಲೇ ನಿಂತು ನೋಡ್ತಿತ್ತು. ಒಂದಿನ ಅದ್ಹೇಗೋ ಪೂರ್ವಿ ಬೇರೆ ಬೆಕ್ಕುಗಳ ಜೊತೆಗೆ ಜಗಳ ಮಾಡಿಕೊಂಡು ಬಾಲಕ್ಕೆ ಗಾಯ ಮಾಡ್ಕೊಂಡು ಬಂದಿತ್ತು. ಕೊನೆಗೆ ಅದು ಇನ್ಫೆಕ್ಶನ್ ಆಗಿ ಯಾವ ಔಷಧಿಗೂ ವಾಸಿ ಆಗದೇ ನಮ್ಮನ್ನೆಲ್ಲ ಬಿಟ್ಟು, ಪೀಲೂನೂ ಒಂಟಿ ಮಾಡಿ ಹೋಗಿ ಬಿಡ್ತು. ಪೀಲೂ ವಾರಗಟ್ಟಲೇ ಉಟ ಇಲ್ದೇ ಪೂರ್ವಿಯ ನಿರಂತರ ಹುಡುಕಾಟ...! ಬೆಕ್ಕಿನ ಸೌಂಡ್ ಕೇಳಿದ್ದಲ್ಲೆಲ್ಲ ಓಡಿ ಹೋಗೋದು ಪಾಪ... :(

       ಪೀಲೂನ ಆರೋಗ್ಯದ ದೃಷ್ಟಿಯಿಂದ ಅವಳಿಗೆ ಬರ್ಥ್ ಕಂಟ್ರೋಲ್ ಆಪರೇಶನ್ ಮಾಡಿಸಲಾಗಿತ್ತು. ಅನೆಸ್ಥೇಶಿಯ ಕೊಡೋವಾಗ ಪೀಲೂಗೆ ಬೇರೆ ನಾಯಿಗಳ ಹಾಗೆ ಬಾಯಿ, ಕಾಲು ಕಟ್ಟಿರಲಿಲ್ಲ. ಅಪ್ಪಾಜಿ ಹೇಳಿದ ಹಾಗೆ ಅವಳು ಸುಮ್ಮನೆ ಮಲಗಿಕೊಂಡು ಡಾಕ್ಟರ್ಸ್‌ಗೆ ಕೋ-ಆಪರೇಟ್ ಮಾಡಿದ್ಲು (ಇನ್ ಫ್ಯಾಕ್ಟ್ ಡಾಕ್ಟರ್ಸ್‌ ಗೆ ಭಯ ಇತ್ತು!  ಬಟ್ ಅವಳ ಸ್ವಭಾವದ ಬಗ್ಗೆ ಅಪ್ಪಾಜಿ ಆಗಲೇ ಹೇಳಿದ್ರು).

       ಪೀಲೂ ಕೂಡ ನಮ್ಮ ಸ್ಕೂಲಿಗೆ ಪ್ರತಿ 'ಪೇರೆಂಟ್ಸ್ ಡೇ'ಗೂ ನನ್ನ ಮೀಟ್ ಮಾಡೋಕೆ ಬರ್ತಾ ಇತ್ತು. ಫಸ್ಟ್ ಟೈಂ ಬಂದಾಗ ನಮ್ಮ ಪ್ರಿನ್ಸಿ ' ಏನ್ರಿ ಇದು ಸ್ಕೂಲ್ ಗೆ ನಾಯಿಗಳನ್ನೆಲ್ಲ ತಗೊಂಬರ್ತೀರಲ್ಲ... ಗಲೀಜು ಮಾಡ್ತಾವೆ... ಯಾರಿಗಾದ್ರು ಕಚ್ಚೀದ್ರೆ ಏನ್ ಗತಿ... ಮಕ್ಕಳಿರ್ತಾವೆ ಇಲ್ಲಿ... ಚೈನ್ ಬೇರೆ ಕಟ್ಟಿಲ್ಲ (ಪೀಲೂಗೆ ಚೈನ್ ಅವಶ್ಯಕತೆ ಇರ್ಲೇ ಇಲ್ಲ)... ಗೊತ್ತಾಗಲ್ವೆನ್ರಿ ನಿಮಗೆ.... ಅಂತ ಬೈದು ಬಿಟ್ರು... ಆಮೇಲೆ ನಾನು, ..ರ್ ಅದು ನಮ್ಮ 'ಪೀಲೂ' ತುಂಬಾ ಒಳ್ಳೇದು, ಅದಕ್ಕೆ ಸುಸ್ಸು ಬಂದ್ರೂ ಅದು ಆಚೇನೇ ಹೋಗಿ ಮಾಡುತ್ತೆ, ಯಾರಿಗೂ ಕಚ್ಚಲ್ಲ... Don't worry sir, 'She is very friendly' ಬೈಬೇಡಿ ಸರ್ ಪ್ಲೀ...ಸ್ ಅಂದೆ... ಅಷ್ಟು ಮಾತಾಡೋತ್ತಿಗೆ ನಮ್ಮ ಪೀಲೂ ಏನೂ ಅಂತ ಅವರಿಗೇ  ಆಗ್ಲೇ ಗೊತ್ತಾಗಿ ಸ್ಮೈಲ್ ಕೊಟ್ಟು ಹೊರಟಿದ್ರು...! 

       ಪೀಲೂಗೆ ನನ್ನ ರೂಮ್, ಕಾಟ್, ನನ್ನ ಫ್ರೆಂಡ್ಸ್- ಸಂಗಿತಾ, ಮುಕ್ತಾ, ರೂಪಾ, ಪದ್ಮಾ, ಸವಿತಾ, ಸಾವಿತ್ರಿ.... ಎಲ್ಲರೂ ಗೊತ್ತಿದ್ರು... ಅಪ್ಪಾಜಿ ಗೇಟ್ ಎಂಟರ್ ಆಗಿದ್ದೇ ತಡ ಗಾಡಿ ಇಳಿದು ಓಡಿ ದಾರೀಲಿ ಸಿಗೋವ್ರಿಗೆಲ್ಲ ಮಾತಾಡ್ಸಿಕೊಂಡು ನನ್ನ ರೂಮಿಗೆ ಬಂದ್ಬಿಡೋದು. ಆದರೆ ಒಂದ್ಸಲ ಅಪ್ಪಾಜಿ ದೆಲ್ಹಿಗೆ ಆರ್ಟ್ಸ್ ವರ್ಕ್ ಶಾಪ್ ಗೆ ಹೋಗಿದ್ರು ಹಾಗಾಗಿ ಪೀಲೂ ಕೂಡ ಬಂದಿರ್ಲಿಲ್ಲ. ಅವತ್ತು ಎಲ್ಲರೂ ತುಂಬಾ ಮಿಸ್ ಮಾಡ್ಕೊಂಡಿದ್ವಿ... ಹಂ..... ಪೀಲೂನ ಹನ್ನೆರಡು ವರ್ಷದ ಲೈಫ್ ಜರ್ನಿ ಎಷ್ಟ್ ಹೇಳೀದ್ರು ಮುಗಿಯಲ್ಲ.

       "ಪೀಲೂ ಈಗ ನಮ್ಮೆಲ್ಲರ ಮನಸ್ಸಿನಲ್ಲಿ ಮಾತ್ರ"... :(
      
       1.5 ವರ್ಷಗಳ ಹಿಂದೆ ಅವಳಿಗೆ 'uterine tumor (cancer)' ಆಗಿ ಆಪರೇಶನ್ ಸಕ್ಸೆಸ್ ಆದ್ರೂ ಕೂಡ ನೋವು, ಕೆಟ್ಟ ಖಾಯಿಲೆ ವಾಸಿ ಆಗ್ಲೇ ಇಲ್ಲ. ಡಾಕ್ಟರ್ ಕೂಡ ಹೇಳಿಬಿಟ್ಟಿದ್ರು, 'ನಿಮ್ಮ ಪೀಲೂ ಇನ್ನು ಹೆಚ್ಚು ಬದುಕಲ್ಲ, ಯಾವ ಟ್ರೀಟ್ ಮೆಂಟ್ ಗಳೂ ಉಪಯೋಗ ಆಗಲ್ಲ ' ಅಂತ. ಅದಕ್ಕೆ ಹುಷಾರಿಲ್ದಾಗ ನಾನು ಊರಿಗೆ ಹೋಗಿದ್ದೆ ಬಟ್ ನನಗೆ ಆಗ ರಜೆ ಇರ್ಲಿಲ್ಲ ಹಾಗಾಗಿ ಮನಸ್ಸಿಲ್ಲದೆ ಬೆಂಗಳೂರಿಗೆ ಮತ್ತೇ ವಾಪಸ್ ಬಂದೆ. ಅಪ್ಪಾಜಿ ಅಮ್ಮ ಪೀಲೂವಿನ ಆರೈಕೆ... ಬಟ್ ಪೀಲೂವಿನ ಕೊನೆಯ ದಿನ ಧಾರವಾಡದ UAS ವೆಟರ್ನರಿ ಸೆಕ್ಶನ್ ನಲ್ಲಿ. ಪೀಲೂ ಸಾಯೋವಾಗ ಅಪ್ಪಾಜಿ ಮುಖವನ್ನೇ ನೋಡುತ್ತಿತ್ತಂತೆ... ಅಪ್ಪಾಜಿ ದುಃಖಿಸುತ್ತಲೇ ನಮೆಗೆ ಫೋನ್ ಮಾಡಿ ವಿಷಯ ತಿಳಿಸಿದ್ರು. ಪೀಲೂ ಇಂದಿಗೂ ನಮ್ಮೆಲ್ಲರ ಕನಸಿನಲ್ಲಿ ಕಾಡುತ್ತೆ...!

       ಪೀಲೂ ಯಾವಾಗಲೂ ಬಿಸಿ ಬಿಸಿ ಊಟವನ್ನೇ ಮಾಡ್ತಿತ್ತು. ಅಮ್ಮ ಮಾಡಿದ ನುಗ್ಗೆ ಕಾಯಿ ಸಾರು ಅಂದ್ರೆ ಪಂಚಪ್ರಾಣ...! ಇದೆಲ್ಲ ನಮ್ಮ ಅಜ್ಜಿ ಅದಕ್ಕೆ ಅಭ್ಯಾಸ ಮಾಡ್ಸಿದ್ರು :) ನಮ್ಮ ಮನೆಯಲ್ಲಿ ಬಾಡಿಗೆ ಇದ್ದ ಕ್ರಿಶ್ಚಿಯನ್ನರು ಫಿಷ್- ಚಿಕನ್ ಮಾಡಿದಾಗ ಆಸೆಗೆ ಸ್ವಲ್ಪ ತಿನ್ನುತ್ತಿತ್ತಷ್ಟೇ. ಪೀಲೂ ಮತ್ತು ಪೂರ್ವಿಗೆ ಟೈಂ ಟು ಟೈಂ ಊಟ ಇಲ್ದಿದ್ರೂ... ಬಿಸ್ಕಿಟ್ಸ್, ಡ್ರೈ ಫ್ರುಟ್ಸ್ (ಬೆಳಿಗ್ಗೆ 6ಕ್ಕೆ ಹಾಗೂ ಸಂಜೆ 5ಕ್ಕೆ) ಮಾತ್ರ ಕಂಪಲ್ಸಿರಿ ಬೇಕೇ ಬೇಕಾಗ್ತಿತ್ತು. ನಾವು ಊರಿಗೆ ಹೋದಾಗಲೆಲ್ಲ ವಾಪಸ್ ಬರೋವಾಗ ಪೀಲೂ ಕೂಡ ನಮ್ಮನ್ನು ಕಳಿಸೋಕೆ ಬರ್ತಾ ಇತ್ತು. ನಮ್ಮ ಬಸ್ ಹೊರಡುವ ವರೆಗೂ ನಮ್ಮ ಪಕ್ಕದಲ್ಲಿ ಕೂರ್ತಿತ್ತು. ಈಗ ಊರಿಗೆ ಹೋದಾಗ ಫುಲ್ ಎಕ್ಸೈಟ್ ಆಗಿ ಖುಷಿಯಿಂದ ಕುಣಿದು ನಮ್ಮ ಜೊತೆಗೆ ಆಟ ಆಡುವ ಪೀಲೂ ನಮ್ಮೊಟ್ಟಿಗಿಲ್ಲ. ನಮಗಿಂತ ಹೆಚ್ಚಾಗಿ ಅಮ್ಮನಿಗೆ ದಿನಾ ಸ್ಕೂಲಿನಿಂದ ಬಂದ್ಮೇಲೆ ಪೀಲೂನ ನೆನಪು ಹೆಚ್ಚಾಗಿ ಕಾಡುತ್ತೆ.... :(

ಹೇಳೋದ್ ಮರ‍್ತಿದ್ದೆ :

ಆದರೆ ಇದನ್ನು ಪೋಸ್ಟ್‌ ಮಾಡುವ ಮೊದಲು ಅಂದರೆ ಬೆಳಗ್ಗೆ ಆಶ್ಚರ್ಯಕರ ಸುದ್ದಿಯೊಂದನ್ನು ಅಪ್ಪಾಜಿ ಫೋನ್‌ ಮೂಲಕ ತಿಳಿಸಿದರು. ಪೀಲೂ ವಾಪಸ್‌ ಬಂದಿದೆ ಅಂತ!... ನನಗೆ ನಂಬಕ್ಕಾಗಲಿಲ್ಲ.. ಗೊಂದಲವೂ ಆಯ್ತು. ಆಮೇಲೆ ನೆನಪಾಯ್ತು... ಪೀಲೂ ಹೋದಮೇಲೆ ಮತ್ತೊಂದು ನಾಯಿ ಮರಿ ತಂದಿದ್ದೆವು. ಸುಮಾರು ಎರಡು ತಿಂಗಳವರೆಗೆ ನಮ್ಮನೆಯಲ್ಲಿ ಇದ್ದ ಅದಕ್ಕೂ ಪೀಲೂ ಅಂತಾನೇ ಹೆಸಿರಿಟ್ಟಿದ್ದೆವು. ಆಮೇಲೆ ಅದು ಯಾಕೋ ಏನೋ... ಮನೆ ಬಿಟ್ಟು ಹೊರಟುಹೋಗಿತ್ತು. ಈಗದು ವಾಪಸ್‌ ಬಂದಿದೆಯಂತೆ!!!
--
       

8 comments:

  1. ಅಶ್ವಿನಿ, 'ಪೀಲೂ-ಪೂರ್ವಿ' ಕಥೆ ತುಂಬಾ ಆಪ್ತತತೆಯಿಂದ ಕೂಡಿದ್ದು ಚೆನ್ನಾಗಿ ಮೂಡಿ ಬಂದಿದೆ. " ಶ್ರೀ " ಯ ಹಾದಿಯಲ್ಲೇ ಸಾಗು, ಒಳ್ಳೆಯದಾಗಲಿ.
    - ಸಂತೋಷ್ ಅನಂತಪುರ

    ReplyDelete
  2. nijvaaglu... navu naayi endella baiyutteve... adkkiruva preeti... nenake.... manushyaralli kaanuvadu aparuupa...

    ReplyDelete
  3. ಅಶ್ವಿನಿ,
    ಪ್ರಾಣಿಗಳು ಹಾಗು ಮನುಷ್ಯರ ನಡುವೆ ಬೆಳೆಯುವ ಆಪ್ತಸಂಬಂಧವನ್ನು ನೋಡಿದಾಗ ಅಚ್ಚರಿಯಾಗುತ್ತದೆ. ಈ ಸಂಬಂಧವನ್ನು ಅಷ್ಟೇ ಆಪ್ತವಾಗಿ ಲೇಖಿಸಿದ ನಿಮಗೆ ಅಭಿನಂದನೆಗಳು.

    ReplyDelete
  4. @ Santhosh & Sunaath , Thank u sir :-)
    @ Dr.Chandrika, Thank U madam :-)

    ReplyDelete
  5. super story ashwini, i guess i met ur peelu when u were in sadakeri, in ur new house

    ReplyDelete
  6. @ Vj, Thank u. May i know who is this..

    ReplyDelete
  7. ಅಶ್ವಿನಿ...ನನ್ನ ಅನುಭವಕ್ಕೆ..ನೀವು ಅಕ್ಷರ ರೂಪ ಕೊಟ್ಟೀರಿ ಅನಿಸ್ತು...ಕೊನೆಸಾಲು ಓದೋಕೆ ಕಣ್ಣು ಮಂಜು ಮಂಜು.

    ReplyDelete