Monday, February 14, 2011

ಕೋಳಿಕಾಲಿನ ಸಂಕಟಗಳೂ ಮತ್ತು ಅಣ್ಣನ ಬಿರುದೂ...


ಪ್ರತಿದಿನ ಬೆಳಿಗ್ಗೆ 5.30ಕ್ಕೆ ಏಳುವುದು, ಅದೂ ಹನ್ನೊಂದರ ವಯಸ್ಸಿನಲ್ಲಿ  ಅಂದರೆ ಕಷ್ಟವೇ. ಆದರೆ ನವೋದಯಕ್ಕೆ ಹೋದಾಗ ಬೆಳಿಗ್ಗೆ ಏಳುವುದು ನನಗೆ ಹೊಸದು ಎನಿಸಲಿಲ್ಲ.  ಸ್ಕೂಲ್ ಗೆ ಸೇರೊಕು ಮುಂಚೆ ಬೆಳಿಗ್ಗೆದ್ದು 'ಕರಾಟೆ' ಕ್ಲಾಸ್ ಗೆ ಹೋಗ್ತಾ ಇದ್ದೆಆದ್ರೆ ಇಲ್ಲಿ 'ಕರಾಟೆ' ಕ್ಲಾಸ್, ಸ್ವಿಮ್ಮಿಂಗ್ ಇಲ್ಲ ಅಂತ ಗೊತ್ತಾಗಿ, ಅಯ್ಯೊ ನನ್ನ 'ಕರಾಟೆ' ಅಭ್ಯಾಸ 'ಹಳದಿ ಬೆಲ್ಟ್' ಗೆ ಮುಗದೋಯ್ತಲ್ಲ ಅಂತಾ ಬೇಜಾರಾಯ್ತು. ಇನ್ನು ಸ್ವಿಮ್ಮಿಂಗ್ ಪೂಲ್ ನ ಮಾತೇ ಇಲ್ಲ ಬಿಡಿ. ಯಾಕೆಂದ್ರೆ ಬೆಳಗಿನ ಜಾಗಿಂಗ್ ಮುಗಿಸಿ ಓಡಿ ಬಂದು ನಾನು.. ನೀನು... ಅಂತ ಸ್ನಾನಕ್ಕೆ ಬಾತ್ ರೂಮ್ ಗೋಸ್ಕರ ಕಿತ್ತಾಡೋದೇ ಒಂಥರಾ ಮಜಾ, ಒಂಥರಾ ಬೇಜಾರು. ಕೆಳಗಿನಿಂದ ಮೇಲೆ ಬಕೀಟಿನಲ್ಲಿ ನೀರು ತಂದು ಆ ತಣ್ಣೀರನ್ನು ಸ್ನಾನ ಮಾಡುವಾಗ ಕೇಳಬೇಕೇ? ಅದರಲ್ಲೂ ಮೂರೂ ಸೀಸನ್ಗಳಲ್ಲೂ ತಣ್ಣೀರೇ ತಣ್ಣೀರು... ಪ್ರತಿ ದಿನ ಒಬ್ಬೊಬ್ಬರಿಗೂ, ಬಾತ್ರೂಂ, ಟಾಯ್ಲೆಟ್ ಕ್ಲೀನ್, ಕಸ-ನೆಲ ಒರೆಸುವುದು, ಮೆಸ್ನಲ್ಲಿ ಸರ್ವೀಂಗ್ ಡ್ಯೂಟಿ ಕಟ್ಟಿಟ್ಟದ್ದೇ.  ಸ್ವಾವಲಂಬಿ ಹಾಗೂ ಕರ್ತವ್ಯ, ಜವಾಬ್ದಾರಿ ಜೀವನಕ್ಕೆ ಇಷ್ಟೆಲ್ಲ ತಯಾರಿ ಅಂತ ಶಾಲೆಯಿಂದ ಹೊರಬಂದಮೇಲೆ ಅರಿವಾಯ್ತು. ಆದರೆ ಅಲ್ಲೀವರೆಗೆ ಇದೆಲ್ಲ ಪನಿಶ್ಮೆಂಟ್ ಥರ ಅನ್ನಿಸ್ತಿತ್ತು. ಇದೆಲ್ಲಕ್ಕಿಂತ ಮೊದಲು ಅಂದರೆ ಬೆಳಿಗ್ಗೆ 4ರಿಂದ 5ರತನಕ ಎಂ.ಪಿ ( ಮಲ್ಟಿಪರ್ಪಸ್)  ಹಾಲ್ ನಲ್ಲಿ ಸ್ಟಡೀಸ್ ಗೆ ಕರೆದುಕೊಂಡು ಹೋಗುತ್ತಿದ್ದರು.  

ಅವಸರದಲ್ಲಿ ರೆಡಿ ಆಗಿ 7.15ಕ್ಕೆ ಬ್ರೇಕ್ ಫಾಸ್ಟ್ ಗೆ ಹೋದಾಗ ನಮ್ಮ ಪ್ರಿನ್ಸಿ, ಕಣ್ಣಲ್ಲೇ ಎಲ್ಲರ ಅಟೆಂಡನ್ಸ್...! ಸಾಮಾನ್ಯವಾಗಿ ನನ್ನ ’ಬುಧವಾರ’ದ ತಿಂಡಿ ಸ್ಕಿಪ್...! ಬುಧವಾರ ಯಾವ ದೇವರಿಗೆ ಉಪವಾಸ ಇರಬಹುದು ಅನ್ಕೋಳ್ತಿದಿರಾ... ಅಯ್ಯೋ... ನಾನು ಇವತ್ತಿಗೂ ಒಂದು ದಿನವೂ ಯಾವ ದೇವರಿಗೂ, (ಆದರೆ ಸುಮ್ ಸುಮ್ನೆ ಉಪವಾಸಗಳು ಬಹಳಷ್ಟ ಇರ್ತವೆ ಬಿಡಿ) ಉಪವಾಸ ಮಾಡಿದವಳಲ್ಲ... ಬುಧವಾರದ ತಿಂಡಿ ’ಕಾಂಕ್ರೀಟ್’...!!! ನನಗೆ ಇಷ್ಟವಾಗದ ಆ ತಿಂಡಿ ನನ್ನ ಬೆಸ್ಟ್ ಫ್ರೆಂಡ್ ಸಂಗೀತಾಗೆ ಇಷ್ಟ... ನಮ್ಮ ಪ್ರಿನ್ಸಿ ಅಲ್ಲಿಂದಾನೇ ’ಏ ಬೆನಕಟ್ಟಿ ಎಲ್ಲಿ ನಿನ್ನ ಫ್ರೆಂಡ ಆ ’ಕೋಳಿಕಾಲು’.... ’ಸ...ರ್ ಅವಳು... ಅಲ್ಲಿ ನೋಡಿ ಬರ್ತಿದಾಳೆ’ ಅಂತ ಹೇಳಿ ಎಸ್ಕೇಪ್.

ಎಂಟಕ್ಕೆ ಅಸೆಂಬ್ಲಿ, ಸ್ಕೂಲ್ ಲೀಡರ್ ಪ್ರಿನ್ಸಿಪಾಲ್ ಅನ್ನು ಕರೆದುಕೊಂಡು ಬರುವ ಮುಂಚೆ ನಮ್ಮ ಪಿಇ ಮಾಸ್ಟರ್ಸ್ ಯೂನಿಫಾರ್ಮ್ ನೀಟ್ ಆಗಿಲ್ಲ. ಶೂಸ್ ಕೊಳೆ ಅಂತೆಲ್ಲಾ... ಹುಡುಗರಿಗೆ ಹಿಗ್ಗಾ ಮುಗ್ಗಾ ಥಳಿಸುತ್ತಿದ್ದರು. ನಂತರ ಗುಡ್ ಮಾರ್ನಿಂಗ್, ಟುಡೇಸ್- ಕ್ಯಾಲೇಂಡರ್, ಥಾಟ್, ನ್ಯೂಸ್, ಥಾಟ್ ಎಕ್ಸಪ್ಲಿನೇಶನ್ ಇವೆಲ್ಲಾ ಪ್ರತಿಯೊಬ್ಬರಿಗೂ ಕಡ್ಡಾಯವಾಗಿ... ಇದೆಲ್ಲಾ ಆದಮೇಲೆ ನಮ್ಮ ಪ್ರಿನ್ಸಿಪಾಲರ ಮಂಗಳಾರತಿಯನ್ನೊಳಗೊಂಡ ಭಾಷಣ (ಕೆಲವೊಂದು ಸಲ ಮಾತ್ರ). ಆಮೇಲೆ ಒಂದು ಹಾಡು (ದಿನಾಲೂ ಬೇರೆ ಬೇರೆ) ಅವುಗಳಲ್ಲಿ ಅತೀ ದೊಡ್ಡದೆಂದರೆ...

ಹಮ್ ನವಯುಗಕೀ ನಯೀ ಭಾರತೀ ನಯೀ ಆರತಿ
ಹಮ್ ಸ್ವರಾಜ್ಯಕೀ ರಿಚಾನವನ ಭಾರತ ಕೀ ನವ ಲಯ ಹೋ
ನವ ಸೂರ್ಯೋದಯ, ನವ ಚಂದ್ರೋದಯ
ಹಮೀ ನವೋದಯ ಹೋ...

ಒಟ್ಟು ಐದು ಪ್ಯಾರಾಗಳು. ನಂತರ ಪ್ಲೆಡ್ಜ್, ರಾಷ್ಟ್ರಗೀತೆ, ಜೈಹಿಂದ್ ಅನ್ನೋ ಅಷ್ಟರಲ್ಲಿ ದಿನಕ್ಕೆ ಐದಾರು ವಿಕೆಟ್ ಡಮಾರ್! 'ನೀನು ತೆಳ್ಳಗೆ ಇದ್ದೀಯ. ತುಂಬಾ ವೀಕ್' ಅಂತೆಲ್ಲಾ ಹೇಳುತ್ತಿದ್ದರು. ಆದರೆ ಒಂದೂ ದಿನವೂ ಅಸೆಂಬ್ಲಿಯಲ್ಲಿ ತಲೆ ಸುತ್ತಿ ಬೀಳಲಿಲ್ಲ ನಾನು! 

8.30ಕ್ಕೆ ಕ್ಲಾಸಸ್, 11ಕ್ಕೆ ಬಿಸ್ಕಿಟ್ಸ್ ಅಥವಾ ಹಣ್ಣುಗಳ ಬ್ರಂಚ್ ಟೈಮ್, ಮೊದಮೊದಲು ಅಂದರೆ ಹೊಸ ಮೆಸ್ ರೆಡಿಯಾಗುವ ಮೊದಲು 1 .30ಕ್ಕೆ ಹುಡುಗರಿಗೆ ಊಟ, ಹುಡುಗಿಯರಿಗೆ 2ಕ್ಕೆ :(. ಹೊಸ ಮೆಸ್ ತಯಾರಾದ ನಂತರ ಎಲ್ಲರಿಗೂ 1 .30ಕ್ಕೇ. ನಂತರ 3.15ಕ್ಕೆ ಸೂಪರ್ವಿಶನ್ ಕ್ಲಾಸಸ್ (ಪ್ರತಿದಿನ ಒಂದೊಂದು ವಿಷಯದ ಕುರಿತು ಅಭ್ಯಾಸ ಮಾಡುವುದು). 4.50ಕ್ಕೆ ಸ್ನ್ಯಾಕ್ಸ್, ಐದಕ್ಕೆ ಗೇಮ್ಸ್, ಗೇಮ್ಸ್ ವೇಳೆ ಮತ್ತು ಬೆಳಗಿನ ಜಾಗಿಂಗ್ ಸಮಯದಲ್ಲಿ ಲೇಟಾಗಿ ಬಂದವರಿಗೆ ಬೆಂಡೌನ್ ಇದ್ದದ್ದೇ. ಇಲ್ಲಾಂದ್ರೆ ೪೦೦ ಮೀ. ಗ್ರೌಂಡ್ ಅನ್ನು ನಾಲ್ಕು ಸಲ ರೌಂಡ್ ಹಾಕಬೇಕು. ಬೆಳಗಿನ ಜಾಗಿಂಗ್ ಗೆ ಲೇಟ್ ಆದರಂತೂ ಮುಗೀತು ಕತೆ. ನಾಲ್ಕರ ಜೊತೆ ಮತ್ತೂ ನಾಲ್ಕು ರೌಂಡ್ ಓಡಲೇಬೇಕು. ಸಂಜೆ ಏಳಾಗುತ್ತಿದ್ದಂತೆ ನಮಸ್ತೇ ಶಾರದಾ ದೇವಿ.... ಅಂತ ಪ್ರಾರ್ಥನೆ ಮಾಡಿ ಅಭ್ಯಾಸಕ್ಕೆ ಕುಳಿತುಕೊಳ್ಳುತ್ತಿದ್ದೆವು. ಎಂಟಕ್ಕೆ ಊಟ. ಅಷ್ಟೂ..........ದ್ದ ಲೈನ್ ಮುಗಿದು ಆಮೇಲೆ 'ಅನ್ನಪೂರ್ಣೆ ಸದಾಪೂರ್ಣೆ' ಹೇಳೋಷ್ಟೊತ್ತಿಗೆ ತಟ್ಟೆಯೊಳಗಿರೋ ಚಪಾತಿ ತಿನ್ನು ತಿನ್ನು ಬಾ.. ಅಂತ ಕರೆದ ಹಾಗಾಗ್ತಿತ್ತು.  ಅದರಲ್ಲೂ ಕೊನೇ ಟೇಬಲ್ನಲ್ಲೇ ನಾವು ಕೂತ್ಕೊಳ್ಳೋದು. ಹಂಗೂ ಹಿಂಗೂ ಮಾಡಿ ಹೌಸ್ಮದರ್ ಕಣ್ಣು ತಪ್ಪಿಸಿ ;) ಆಗಲೇ ಒಂದು ಚಪಾತಿ ಗುಳುಂ! :)

ಅಷ್ಟೊಂದು ಸ್ಟ್ರಿಕ್ಟ್ ಸ್ಕೂಲ್ನಲ್ಲೂ ಸಿಕ್ಕಾಪಟ್ಟೆ ತರಲೆ ಮಾಡ್ತಿದ್ವಿ. ಯಾಕೆಂದ್ರೆ ಹೌಸ್ಮದರ್ ಕೊಡೋ ಕಷ್ಟ ಕಡಿಮೆ ಮಾಡ್ಕೊಂಡು ರಿಲೀಫಾಗೋದಕ್ಕೆ. ಹಾಗೆ ನೋಡಿದ್ರೆ ನಾನು ಇಲ್ಲಿ ಇದ್ದಾಗ ಕಡಿಮೆ ಮಾತನಾಡುವ ಹುಡುಗಿಯಾಗಿದ್ದೆ. ಆದರೆ ಈಗ ಹಾಗಿಲ್ಲ ಬಿಡಿ, ನಿಲ್ಲಿಸು.... ಅನ್ನೋವರೆಗೂ ಊಂಹೂ. ಆದರೆ ಒಮ್ಮೆ ನಾನು ಟ್ವೆಲ್ತ್ ನಲ್ಲಿದ್ದಾಗ ಬಹಳ ಡಿಪ್ರೆಸ್ ಆಗಿದ್ದೆ ಇದಕ್ಕೆ ಕಾರಣ ಹೌಸ್ ಮದರ್. ಆದರೆ ಆಗ ನನಗೆ ಫುಲ್ ಸಪೋರ್ಟಿವ್ ಆಗಿದ್ದವರು ಶಾಲೆಗೆ ಬಂದಾಗ ನನ್ನ ಕೆನ್ನೆ ಹಿಂಡಿ ಗದರಿದ್ದ ನನ್ನ ಮೆಚ್ಚಿನ ಪ್ರಿನ್ಸಿಪಾಲ್. ನನ್ನ ಪರಿಸ್ಥಿತಿ ಮನಗಂಡು ಕಂಗಾಲಾದ ಅಪ್ಪಾಜಿಗೂ ಪ್ರಿನ್ಸಿ ಫೋನ್ ಮಾಡಿ ಸಮಾಧಾನ ಹೇಳಿದ್ದರು. ಸತತ ಏಳು ವರ್ಷಗಳವರೆಗೂ ಅಪ್ಪಾಜಿ ಪತ್ರದ ಮೂಲಕ ಧೈರ್ಯ, ಏಕಾಗ್ರತೆ, ಗುರಿ ಮುಂತಾದ ಬಗ್ಗೆ ಹೇಳುತ್ತಿದ್ದರು. 

ಆದರೆ ಆಗಿನ ಹಾಗೆ ನಾನಿಲ್ಲ. ಈಗ ಬದಲಾಗಿದ್ದೇನೆ. ಎಂಥ ಡಿಪ್ರೆಸ್ಡ್ ಮೈಂಡ್ಗಳಿಗೂ ಕೌನ್ಸೆಲಿಂಗ್ ಮಾಡಿ ಸಮಾಧಾನ, ಧೈರ್ಯ ಹೇಳಿಬಿಡ್ತಾಳೆ ಅಂತ ಅಕ್ಕ ಅಮ್ಮ ಹೇಳ್ತಿರ್ತಾರೆ . ಹೀಗಾಗಿ ನನ್ನ ಅಣ್ಣ 'ಫ್ರೀ ಅಡ್ವೈಸರಿ ಬಾಕ್ಸ್' ಅಂತ ಬಿರುದು ಕೊಟ್ಟುಬಿಟ್ಟಿದ್ದಾನೆ :) 

ಹೇಳೋದ್ ಮರ್ತಿದ್ದೆ :

ಅಥ್ಲೇಟಿಕ್, ರೀಜನಲ್, ನ್ಯಾಶನಲ್ ಮೀಟ್ ಬಂದ್ರಂತೂ ವೆರೈಟಿ ಸ್ವೀಟ್ಸ್ ಏನೋ ಸಿಗ್ತಿದ್ವು. ಆದರೆ ತಿಂಗಳುಗಟ್ಲೇ ಬೆಳಿಗ್ಗೆ ಮತ್ತು ಸಂಜೆ ಜಾಗಿಂಗ್, ಗೇಮ್ಸ್ ಟೈಮ್ನಲ್ಲಿ ಬರೀಗೈಯಿಂದ ಆ ದೊಡ್ಡ ಗ್ರೌಂಡ್ಅನ್ನು ಕ್ಲೀನ್ ಮಾಡಿದ್ದನ್ನು ನೆನಪಿಸಿಕೊಂಡರೆ ಈಗ್ಲೂ ಕೈ ಚುರುಗುಡ್ತಾವೆ. ಕೈಗೆ ಸಣ್ಣ ಕಲ್ಲು ಚುಚ್ಚಿ ಗಾಯವಾಗುತ್ತಿದ್ದರಿಂದ ಆಗ ನಾವು ಕಟ್ಟಿಗೆ ಮತ್ತು ದೊಡ್ಡ ದೊಡ್ಡ ಕಲ್ಲುಗಳಿಂದ ನೆಲವನ್ನು ಸಮ ಮಾಡಲು ತೊಡಗುತ್ತಿದ್ದೆವು. ಅದನ್ನು ಕಂಡ ನಮ್ಮ ಪಿಇ ಮೇಡಮ್ ಮತ್ತು ಲೀಡರ್ಸ್ ಬೈಯ್ದು ಕೈಯಿಂದಲೇ ಮಾಡಬೇಕು ಅಂತ ಆರ್ಡರ್ ಮಾಡ್ತಿದ್ರು :( ಅಂತೂ ಏಳು ವರ್ಷದಲ್ಲಿ ನಾವೆಲ್ರೂ ಸೇರಿ ೨ ಅಡಿ ಎತ್ತರಕ್ಕಿದ್ದ 
ಗುಡ್ಡವನ್ನು ಗ್ರೌಂಡ್ನ ಸಮಕ್ಕೆ ತಂದಿದ್ದೆವು!  


ಚಿತ್ರಕೃಪೆ: http://www.modthesims.info

8 comments:

  1. ನನಗೆ ಚಿಕ್ಕಂದಿನಲ್ಲಿ ನವೋದಯ ವಿದ್ಯಾರ್ಥಿಗಳನ್ನು ನೋಡಿದಾಗಲೆಲ್ಲ.. ನನಗೂ ಅವ್ರಂತೆ ಹಾಸ್ಟೆಲ್ ನಲ್ಲಿ ಸೇರ್ಕೋಬೇಕು ಫ್ರೆಂಡ್ಸ್ ಜೊತೆ ಎಂಜಾಯ್ ಯಾವಾಗಲೂ ಓದಬೇಕು ಎಂಜಾಯ್ ಮಾಡ್ಬೇಕು, ತರ್ಲೆ ಮಾಡ್ಬೇಕು ಅಂತೆಲ್ಲಾ ಆಸೆ ಇತ್ತು. ಆದರೆ ಈಗ ಆ ಅನಿಸಿಕೆ ಇಲ್ಲ.. ಅದರಲ್ಲೂ ರೆಸಿಡೆನ್ಸಿ ಸ್ಕೂಲ್ಗಳೆಂದರೆ ಅಲ್ಲಿ ಓದುವವರ ಬಗ್ಗೆ ಕನಿಕರ ಮೂಡುತ್ತೆ.

    ReplyDelete
  2. nice nice... barahada shailiyalli ullasavide :)

    ReplyDelete
  3. @ ಮಂಸೋರೆ,ನಾವು ಸಿಕ್ಕಾಪಟ್ಟೆ ಎಂಜಾಯ್, ತರಲೆ ಮಾಡಿದಿವಿ ಆಗ ಕಷ್ಟ ಅನ್ಸಿದ್ದು ಈಗ ಒಳ್ಳೇದೆ ಆಗಿದೆ ನಾನು ತುಂಬಾ ಕಲಿತಿದ್ದೀನಿ. ಬಹುಶಃ ಈಗ ನನಗೆ ಜೀವನದಲ್ಲಿ ಯಾವುದೇ ಜವಾಬ್ದಾರಿ, ಕರ್ತವ್ಯಗಳನ್ನು ನಿಭಾಯಿಸುವುದಕ್ಕೆ ಕಷ್ಟ ಅನಿಸುವುದಿಲ್ಲ.
    ಬಿ ಪಾಜಿಟಿವ್... :) ಎಂಜಾಯ್... :)

    ReplyDelete
  4. @ ಚೇತನಾ, ಥ್ಯಾಂಕ್ಯು ಮ್ಯಾಡಮ್.. :)

    ReplyDelete
  5. ಅಶ್ವಿನಿ,
    ನಿಮ್ಮ ವಿದ್ಯಾರ್ಥಿಜೀವನದ ವಿವರಗಳನ್ನು ಓದುತ್ತಿದ್ದಂತೆ ಖುಶಿ ಆಗ್ತದೆ. ಜೊತೆಗೇ
    ನನ್ನ ಹಾಸ್ಟೆಲ್ ಜೀವನವೂ ನೆನಪಾಗ್ತದ. ಆಪ್ತವಾಗಿ ಮಾತನಾಡೊ ತರಹದ ನಿಮ್ಮ ಶೈಲಿ ಇಷ್ಟವಾಗಿದೆ.

    ReplyDelete
  6. Your writing style has smoothness and and some kind of perfection in selecting words... reading your blog i feel like i am reading any book.

    ReplyDelete
  7. ashu.. tumba chennagi barediddeeyavaa... nanna maganna boarding haakona antare nannavaru naanu aLta irteeni.. eega nee bareda article nodi svlpa kaNNu manjaytu

    ReplyDelete