ಇತ್ತೀಚೆಗೆ ನಾನು ಬೆಳೆದ ಊರು, ಅಲ್ಲಿ ಕಳೆದ ಬಾಲ್ಯ ತುಂಬಾ ನೆನಪಾಗ್ತಿದೆ.. ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿಯಲ್ಲಿ. ಬೆಳೆದಿದ್ದು, ಶಾಲೆಗೆ ಹೋಗಿದ್ದು ದೊಡ್ಡವಾಡದಲ್ಲಿ(ಅಪ್ಪಾಜಿ-ಅಮ್ಮನ ನೌಕರಿ ಅಲ್ಲೇ ಇತ್ತು) ನಾನು ಅಲ್ಲಿ ಓದಿದ್ದು 2ನೇ ಕ್ಲಾಸ್ ವರೆಗೂ ಮಾತ್ರ. ನಮ್ಮ ಹಳ್ಳಿಯಲ್ಲೂ ಕಾನ್ವೆಂಟ್ ಇತ್ತು...! L.K.G and U.K.G ಓದಿದ್ದು ಕಾನ್ವೆಂಟಿನಲ್ಲಿ 1st std. ಬರೋವಷ್ಟರಲ್ಲಿ ಅದೂ ಮುಚ್ಚಿಕೊಂಡು ಹೋಯಿತು. 1ನೇ ಕ್ಲಾಸ್ ಗೆ ಅಮ್ಮನ ಶಾಲೆಗೆ ಸೇರಿಸಿದ್ರು, ಹಾಗೆ ನೋಡಿದ್ರೆ ನಾವು ಮೂರೂ ಜನ ಮಕ್ಕಳು ಮೂರ್ನಾಲ್ಕು ತಿಂಗಳಿದ್ದಾಗಿನಿಂದಲೇ ಅಮ್ಮನ ಜೊತೆ ಶಾಲೆಗೆ ಹೋಗುತ್ತಿದ್ದೆವು. ಆಗಲೇ 7ನೇ ತರಗತಿ ಪಾಠ ಕೇಳಿಸಿಕೊಳ್ಳುತ್ತಿದ್ದೆವು.
ಆಗೆಲ್ಲಾ ಅಮ್ಮ ಮಕ್ಕಳಿಗೆ ರಾಗವಾಗಿ ಹೇಳಿಕೊಡುತ್ತಿದ್ದ "ಚಕೋರಂಗೆ ಚಂದ್ರಮನ ಬೆಳಗಿನ ಚಿಂತೆ" ವಚನ ಇನ್ನೂ ನೆನಪಾಗತ್ತೆ. ಒಮ್ಮೆ ಈ ವಚನವನ್ನು ಹೇಳಿಕೊಡುವ ಸಮಯದಲ್ಲಿ ಅಣ್ಣ, ದೊಡ್ಡದಾದ ಧ್ವನಿಯಲ್ಲಿ 'ಪ್ರಮೋದಂಗೆ ಅಮ್ಮಿಯ ಚಿಂತೆ... " ಅಂತ ರಾಗವಾಗಿ ಹಾಡತೊಡಗಿದ್ದದನಂತೆ! ಏಕೆಂದರೆ ಅಮ್ಮ ಪಾಠ ಹೇಳುವ ಗುಂಗಿನಲ್ಲಿ ಅವನ ಹಸಿವನ್ನು ಗಮನಿಸಿಯೇ ಇರಲಿಲ್ಲವಂತೆ. ಅಷ್ಟಕ್ಕೂ ನನ್ನ ಮತ್ತು ಅಕ್ಕನಿಗಿಂತ ಅವನೇ ಹೆಚ್ಚು ವರ್ಷ ಎದೆಹಾಲು ಕುಡಿದಿದ್ದಂತೆ. ಈಗಲೂ ಆಗಾಗ ಅಮ್ಮ ಅವನ ಹಸಿವಿನ ಹಾಡನ್ನು ನೆನಪಿಸಿಕೊಳ್ತಿರ್ತಾರೆ... ಮತ್ತೆ... ಅವನು ಹೀಗೆ ಹಾಡಿದಾಗ ಕೇವಲ ಎರಡೂವರೆ ವರ್ಷದವನಾಗಿದ್ದನಂತೆ! ಆಹಾ ಕಲಾಕಾರಾ!!!
ದೊಡ್ಡವಾಡದಲ್ಲಿ ನಾವಿದ್ದ ಮನೆ ಕಟ್ಟಿಗೆ ಹಾಗೂ ಮಣ್ಣಿನಿಂದ ಕಟ್ಟಿದ್ದಾಗಿತ್ತು. ದೊಡ್ಡ ಅಡುಗೆ ಮನೆ, ರೂಮಿನಂತ ಒಂದು ಪಾರ್ಟಿಶನ್ ಹಾಗೂ ಹಾಲ್. ಮನೆ ಹಿಂದೆ ಹಿತ್ತಲು, ಮುಂದೆ ದೊಡ್ಡ ವರಾಂಡ. ಹಿತ್ತಲಲ್ಲಿ ಬಾಳೆ, ಕನಕಾಂಬರ, ಗೊರಟಿಗೆ ಗಿಡಗಳು, ವರಾಂಡದಲ್ಲಿ ಸೀತಾಫಲ ಹಾಗೂ ಅಗಲವಾದ ದುಂಡು ಮಲ್ಲಿಗೆ ಬಳ್ಳಿ... ಆಗಾಗ ಬೆಳೆಯುತ್ತಿದ್ದ ಸಣ್ಣ-ಪುಟ್ಟ ತರಕಾರಿ, ಸೊಪ್ಪು ಇತ್ಯಾದಿ... ದೀಕ್ಷಿತರ ಮನೆಯ ನಾಯಿಯಾಗಿದ್ದರೂ ನಮ್ಮಲ್ಲೇ ಬಂದಿರುತ್ತಿದ್ದ ಹುಲಿಯಂಥ ನಾಯಿ ಮತ್ತು ನಮ್ಮ ಬೆಕ್ಕಿನ ಮರಿಗಳು...... ಸುಂದರವಾಗಿತ್ತು ಆ ಹಳ್ಳಿ ಲೈಫ್..!! ಆ ಹಳ್ಳಿ ಬಿಟ್ಟು ಬಂದು ಸುಮಾರು 15ವರ್ಷಗಳಾಗಿವೆ. ಅಮ್ಮ ಈಗಲೂ ಆ ಕನಕಾಂಬರ, ದುಂಡು ಮಲ್ಲಿಗೆಯನ್ನ ಮಿಸ್ ಮಾಡ್ಕೋಳ್ತಾರೆ...!!
ಆ ನಮ್ಮ ಮನೇಲಿ ನಾವು ಹುಟ್ಟೋಕು ಮುಂಚೆಯಿಂದನೂ ಒಂದು ಬೆಕ್ಕು ಇತ್ತು. ಚಿಕ್ಕವರಿದ್ದಾಗ ನಮಗೆ, ಅದರ ಮರಿಗಳೇ ಆಟದ ಸಾಮಾನು..! ಮರಿಗಳಿಗೆ ಹಾಲು ಕುಡಿಸಲು ಚಿಕ್ಕ ಸ್ಪೂನ್,ಲೋಟ ಹಾಗೂ ಮೆದುವಾದ ಟವೆಲ್ ಎಲ್ಲ ಇತ್ತು. ನಮ್ಮ ದುರಾದೃಷ್ಟಕ್ಕೆ ಮನೆಯಲ್ಲಿ ಯಾರೂ ಇಲ್ಲದಿರುವಾಗ ಬೇರೆ ಬೆಕ್ಕುಗಳಿಗೆ ಆ ಪುಟ್ಟ ಕಂದಮ್ಮಗಳು ಬಲಿಯಾಗುತಿದ್ದವು. ಹಾಗೆಲ್ಲಾ ಆದಾಗ ನಾನು ಅಕ್ಕಾ, ಅಣ್ಣಾ ಮತ್ತು ಅಕ್ಕ ಪಕ್ಕದ ಮನೆಯ ಫ್ರೆಂಡ್ಸ್ ಸೇರಿ ಮರಿಯನ್ನು ನಮ್ಮ ವರಾಂಡದಲ್ಲೇ ಮಣ್ಣು ಮಾಡಿ, ಸಮಾಧಿಗೆ ಹೂವಿನ ಅಲಂಕಾರ ಮಾಡಿ ಕಣ್ಣೀರು ಹಾಕುತ್ತಿದ್ದೆವು. ಹೀಗೆ ಮಣ್ಣು ಮಾಡಿ ಹೂವು ಏರಿಸಲು ಐಡಿಯಾ ಕೊಟ್ಟಿದ್ದು ನಮ್ಮಣ್ಣ ಪ್ರಮೋದ. ಟಿವಿಯಲ್ಲಿ 'ಮುತ್ತಿನ ಹಾರ' ನೋಡಿದ್ದರ ಪ್ರಭಾವವಿರಬೇಕು. ಸಣ್ಣ ಸಣ್ಣ ಕಡ್ಡಿಗಳಿಗೆ ಗೊರಟಿಗೆ ಹೂವುಗಳನ್ನು ಸಿಕ್ಕಿಸಿ ಮರಿಯನ್ನು ಹೂತ ಮಣ್ಣಿನ ಮೇಲೆ ಸಿಕ್ಕಿಸುತ್ತಿದ್ದೆವು. ಆಗೆಲ್ಲಾ ತಾಯಿ ಬೆಕ್ಕು ಅದನ್ನು ಗೆಬರಲು ಹವಣಿಸುತ್ತಿತ್ತು. ಅದರ ಸಂಕಟ ನೋಡಿದ ನಮಗೆ ಏನು ಮಾಡಬೇಕೋ ತೋಚುತ್ತಿರಲಿಲ್ಲ.
ಈ ಎಲ್ಲ ದಿನ-ದಿನಚರಿಗಳ ಮಧ್ಯೆ 'ಸಂಡೇ' ಗಾಗಿ ನಾವು ತುಂಬಾ ಕಾಯ್ತಾ ಇದ್ವಿ. ಯಾಕೆಂದ್ರೆ ಅಮ್ಮ ಅವತ್ತು ಸ್ಪೆಶಿಯಲ್ ತಿಂಡಿ ಮಾಡ್ತಿದ್ರು ಅದನ್ನು ಬಾಳೆ ಎಲೆಯಲ್ಲಿ ತಿನ್ನೋದಂತೂ ಇನ್ನೂ ರುಚಿಯಾಗಿರ್ತಿತ್ತು. ಇದೆಲ್ಲ ಆದ ಮೇಲೆ ಅವತ್ತು ಮನೆ ಕಟ್ಟೋ ಪ್ರೊಗ್ರಾಮ್ ಕೂಡ..! ನಮ್ಮಣ್ಣನೇ ಇಂಜಿನೀಯರ್..! ನಾನು, ನನ್ನ ಹಾಗೂ ಅಣ್ಣನ ಫ್ರೆಂಡ್ಸ್ ಎಲ್ಲಾ ಸೇರಿ ದಂಟು, ಬಾಳೆ ಎಲೆ, ಬಿದಿರು ಎಲ್ಲವನ್ನೂ ತಂದು ಮನೆ ಕಟ್ತಾ ಇದ್ವಿ. ಸೊಪ್ಪು, ಕಲ್ಲು-ಮಣ್ಣು, ನೀರು ಮಿಶ್ರಿತ ತಿಂಡಿ-ಚಹ. ಆಗೆಲ್ಲಾ ಅಕ್ಕ ನನಗೆ ಟವೆಲ್ನಿಂದ ಸೀರೆ ಉಡಿಸುತ್ತಿದ್ದಳು. ದೊಡ್ಡಮ್ಮ ಕೊಡಿಸಿದ ಕೆಂಪಗಿನ ಲಿಪ್ಸ್ಟಿಕ್ಅನ್ನು ಹಚ್ಚುತ್ತಿದ್ದಳು. ಕಾಡಿಗೆ, ಪೌಡರ್ ಹಚ್ಚಿಸಿಕೊಂಡು, ಗಲ್ಲದಾಟುವ ಹಾಗೆ ಹೂವು ಮುಡಿಸಿಕೊಂಡು ಸೆರಗು ಸರಿ ಮಾಡಿಕೊಳ್ಳುತ್ತ ಓಡಾಡುತ್ತಿದ್ದೆ. ನಂತರ ಎಲ್ಲ ಸೇರಿ 'ಕೂ' ಗಾಡಿ ಮಾಡಿಕೊಂಡು ಆ ಮೂಲೆಯಿಂದ ಈ ಮೂಲೆವರೆಗೂ ಟ್ರಿಪ್ ಮಾಡಿ ಮಸ್ತ್ ಮಜಾ ಮಾಡ್ತಾ ಇದ್ವಿ.. :)
ಆಗಾಗ ಊರಾಚೆಯ ದೊಡ್ಡ ಕೆರೆಯ ಹತ್ತಿರ ಅಣ್ಣನ ಜೊತೆಗೆ ಗಾಳಿ ಪಟ ಬಿಡಲೂ ನಾನು ನನ್ನ ಫ್ರೆಂಡ್ಸ್ ವಾನರ ಸೈನ್ಯದಂತೆ ಹೋಗ್ತಾ ಇದ್ವಿ. ಬರುವಾಗ ಕೆರೆ ದಂಡೆಯಲ್ಲಿಯ ಮೃದುವಾದ ಮಣ್ಣನ್ನು ತಂದು ಅದರಲ್ಲಿ ಆಟಿಗೆ ಸಾಮಾನು, ಗಣೇಶ ಹೀಗೆ ಏನೇನೋ ಮಾಡ್ತಾ ಇದ್ವಿ. ಇನ್ನು ಬೆಳದಿಂಗಳು ಹಬ್ಬ ಬಂದ್ರೆ ಸಿಕ್ಕಾಪಟ್ಟೆ ಖುಷಿ... ಯಾಕೆಂದ್ರೆ ನನಗೆ ಆ ಮಾಳಿಗೆ ಮೇಲೆ ಚಾಪೆ ಹಾಸಿಕೊಂಡು ಊಟ ಮಾಡೋದು ಅಂದ್ರೆ ತುಂಬಾ ಇಷ್ಟ ಆಗ್ತಿತ್ತು... ನಮ್ಮನೆಯ ಮಾಳಿಗೆ ಹತ್ತೋದು ಸ್ವಲ್ಪ ಕಷ್ಟವಾಗಿತ್ತು... ಒಂದ್ಸಲ ಹಿಂದಿನ ಮನೆಯ ಉದಯ ಅಣ್ಣ ನನ್ನನ್ನು ಮಾಳಿಗೆ ಹತ್ತಿಸೊವಾಗ ಆರಡಿಯಷ್ಟು ಎತ್ತರದಿಂದ ಬೀಳಿಸಿಬಿಟ್ಟಿದ್ದು ಈಗಲೂ ನನ್ನ ಕಾಲಿನ ಗಾಯದ ಕಲೆ ಉದಯ ಅಣ್ಣನನ್ನು ಬೈಯುತ್ತಾ ನೆನಪು ಮಾಡಿಕೊಳ್ಳುವ ಹಾಗೆ ಇದೆ.
ಆಗ ಎಲ್ಲವೂ ಆಟವೇ ನಮಗೆ. ಹಬ್ಬಗಳಲ್ಲಿ ಹೋಳಿ ಹಬ್ಬ ಬಂದ್ರೆ ಮುಗೀತು. ಫ್ರೆಂಡ್ಸ್ ಸೀಮಾ ಮತ್ತು ನೇತ್ರ ಜೊತೆ ಸೇರಿ ಹೋಳಿ ಹಬ್ಬಕ್ಕೆ ಎರಡು ದಿನ ಮುಂಚೆಯಿಂದಲೇ ತಯಾರಿ ಶುರು. ಹಬ್ಬದ ದಿನ ಬೆಳಿಗ್ಗೆ ಬೇಗ ಎದ್ದು ಅಣ್ಣನ ಹಳೆಯ ಅಂಗಿ-ಚಡ್ಡಿ ಹಾಕ್ಕೊಂಡು ಕೈಯಲ್ಲಿ ಪಿಚಕಾರಿ ಹಿಡ್ಕೊಂಡು ಹೋ... ಅಂತ ಹುಡುಗರ ಹಿಂದೆ ಹೋದ್ರೆ... ಕಾಮಣ್ಣನ ಸುಟ್ಟು, ಆ ಕೆಂಡದಲ್ಲಿ ಎಳೆ ಗೋಧಿ, ಕಡಲೆ ಸುಟ್ಟು ತಿಂದ್ಬಿಟ್ಟೇ ಮನೇಗೆ ಬರೋದು... ಅಮ್ಮ ಎಲ್ಲರಿಗೂ ಚೆನ್ನಾಗಿ ಉಜ್ಜಿ ಎಣ್ಣೆ ಸ್ನಾನ ಮಾಡಿಸ್ತಾ ಇದ್ರು. ಅಮ್ಮ ಆಗಲೇ ಹೋಳಿಗೆ, ಕಟ್ಟಿನ ಸಾರು, ಸಂಡಿಗೆ, ಹಪ್ಪಳ, ಬಜ್ಜಿ ಎಲ್ಲವನ್ನೂ ಮಾಡಿ ಪೂಜೆಗೆ ರೆಡಿ ಮಾಡಿ ಇಟ್ಟಿರ್ತಿದ್ರು. ಒಂದು ಸಲ ಹೋಳಿ ಹಬ್ಬದ ದಿನ ನೇತ್ರ ಹೋ.... ಅಂತ ಕೂಗಿಕೊಂಡು, 'ಎಲ್ಲರೂ ಜಲ್ದಿ ಜಲ್ದಿ ಬರ್ರಿ... ವಾಮಣ್ಣನ ಸುಡಾತಾರು" ಅಂತ ಹೇಳಿ ಎಲ್ಲರಿಗೂ ಗಾಬರಿ ಉಂಟು ಮಾಡಿದ್ದಳು...!! ಪಾಪ.. ಕಾಮಣ್ಣ ಅನ್ನೋ ಬದಲು ವಾಮಣ್ಣ ಅಂದುಬಿಟ್ಟಿದ್ದಳು!. ಆದರೆ ವಾಮಣ್ಣ ಅನ್ನೋವ್ರು ಅವರ ಎದುರು ಮನೆಯಲ್ಲಿ ವಾಸವಾಗಿದ್ದರೂ ಪುಣ್ಯ ಅವರಿಗೆ ಅದು ಕೇಳಿರಲಿಲ್ಲ! ಹೋಳಿ ಹಬ್ಬ ಬಂದಾಗಲೆಲ್ಲ ಈ ಇನ್ಸಿಡೆಂಟ್ ನೆನಪಾಗತ್ತೆ.. :)
ಹೂಂ..... ಸ್ವಲ್ಪ ದಿನ ಕಳೆದರೆ ಮತ್ತೆ ಹೋಳಿ ಹುಣ್ಣಿಮೆ ಬರತ್ತೆ. ಆದರೆ ಅಪ್ಪಾಜಿ ಅಮ್ಮ ಧಾರವಾಡದಲ್ಲಿ. ನನ್ನ ಫ್ರೆಂಡ್ಸ್ ಎಲ್ಲಾ ಒಂದೊಂದು ಕಡೆ. ಅಕ್ಕ ಎಂದಿನಂತೆ ಆಫೀಸ್ ಎಂದು ಓಡ್ತಾಳೆ. ಅಣ್ಣ ಫ್ರೆಂಡ್ಸ್ ಜೊತೆ ಹೋಗ್ತಾನೋ ಏನೋ...
ಹೇಳೋದ್ ಮರೆತಿದ್ದೆ:
ಅಕ್ಕ ನನಗೆ ಸಿಂಗಾರ ಮಾಡಿದ ಹಾಗೆ ಬೆಕ್ಕಿನ ಮರಿಗಳಿಗೂ ಕಣ್ಣಿಗೆ ಕಾಡಿಗೆ, ಉಗುರುಗಳಿಗೆ ಬಣ್ಣ, ಹಣೆಗೆ ಬೊಟ್ಟು ಇಡ್ತಿದ್ಲು. ಆದರೆ ಇದೆಲ್ಲ ಆಟ ಸುಮಾರು ಆರು ಗಂಟೆಯ ತನಕ ಮಾತ್ರ. ಏಕೆಂದರೆ ಅಪ್ಪಾಜಿ ಪ್ರಕಾರ ಹೀಗೆಲ್ಲ ಮಾಡೋದು ಟೈಂವೇಸ್ಟ್. ಅದಕ್ಕೆ ಅಕ್ಕ ಒಂದು ಉಪಾಯ ಮಾಡ್ತಿದ್ಲು. ಕೊಬ್ಬರಿ ಎಣ್ಣೆಯ ಬಟ್ಟಲು ತರಲು ಹೇಳುತ್ತಿದ್ದಂತೆ ನಾನು ಓಡುತ್ತಿದ್ದೆ. ಮರಿಗಳನ್ನು ಹಿಡಿದುಕೊಂಡು ಎಣ್ಣೆಯಿಂದ ಕಣ್ಣು ವರೆಸಿ ಕಾಡಿಗೆಯನ್ನು ಅಳಿಸ್ತಿದ್ವಿ. ಪಾಪ ಅವುಗಳ ಒದ್ದಾಟ, ಪುಟ್ಟ ಪುಟ್ಟ ಕೈಗಳಿಂದ ಕಣ್ಣು ಒರೆಸಿಕೊಳ್ಳುವ ಗೋಳು, ಕೆಂಪು ಮಾಡಿಕೊಂಡ ಕಣ್ಣುಗಳು... ಅಯ್ಯೋ ಅನ್ನಿಸುತ್ತಿತ್ತು. ಅಪ್ಪಾಜಿ ಬರ್ತಿದಾರೆ ಎಂದು ಗೊತ್ತಾದ ತಕ್ಷಣ ಮರಿಗಳನ್ನು ತೊಡೆಗಳಿಂದ ಇಳಿಸ್ತಾ ಇದ್ವಿ ಆದರೆ ಆ ಜಾಗದಲ್ಲಿ ಪುಸ್ತಕಗಳು ಏರ್ತಿದ್ವು ಅಂತ ಹೇಳಬೇಕಿಲ್ಲ ತಾನೆ?
ಬಾಲ್ಯದ ಸವಿ ಸಮಯವನ್ನು ಚೆಂದಾಗಿ ಹೇಳಿರುವಿರಿ.
ReplyDelete@ಡಾ. ಚಂದ್ರಿಕಾ, ಥ್ಯಾಂಕ್ಯು ಮೇಡಂ.. :)
ReplyDeleteನವಿರಾದ ಬರಹದಲ್ಲಿ ಅದೆಸ್ಟೋ ಬಾಲ್ಯದ ಮುಗ್ಧತೆ ಇಷ್ಟ ಆಯಿತು.... ಮುಂದುವರೆಯಲಪ್ಪಿ.
ReplyDeleteನವಿರಾದ ನಿರೂಪಣೆ. ಚೆನ್ನಾಗಿದೆ. ನನ್ನ ಬಾಲ್ಯದ ಸವಿ ನೆನಪುಗಳನ್ನೂ ಮೆಲುಕು ಹಾಕಿದೆ... :)
ReplyDelete"ಪ್ರಮೋದಂಗೆ ಅಮ್ಮಿಯ ಚಿಂತೆ..." - ಸೂಪರ್ ಆಗಿದೆ.. :D
"ಅಕ್ಕ ಎಂದಿನಂತೆ ಆಫೀಸ್ ಎಂದು ಓಡ್ತಾಳೆ" - ಅಕ್ಕಂಗೆ ಆಫೀಸಿದೊಂದೇ ಅಲ್ಲಾ... ಅಲ್ಲಿಯ ಕೆಲ್ಸಗಳ ಅಂತಿಮ ಗೆರೆಯ ಚಿಂತೆಯೂ...(Dead Line) :-p :)
@ರಾಘು, ಥ್ಯಾಂಕ್ಸ್ ಅಣ್ಣ... :)
ReplyDelete@ತೇಜಸ್ವಿನಿ, ಥ್ಯಾಂಕ್ಸ್ ಮೇಡಂ. ಅಕ್ಕನಿಗೆ ಹೋಳಿ ಹಬ್ಬದ ದಿನ ಡೆಡ್ ಲೈನ್ ಇಲ್ಲ ಆದರೂ ಅವಳು ಸಿಗಲ್ಲ ಬಿಡಿ.. :)
ಅಶ್ವಿನಿ ಅವರಿಗೆ ಭಾಳ ಚಂದ ಅನಿಸ್ತು.ಓದಿ. ಬಾಲ್ಯ ಅದರ ಮಧುರ ನೆನಪುಗಳು ಎಂದು ಹಸಿರು ನೋಡ್ರಿ..
ReplyDelete@ಉಮೇಶ್,ಥ್ಯಾಂಕ್ಯೂ ಸರ್. ಬಾಲ್ಯದ ನೆನಪು ನಮ್ಮನ್ನ ಯಾವಾಗ್ಲೂ ಖುಶಿಯಾಗಿ ಇಡ್ತಾವು ಅಂತ ಅನಸ್ತದರಿ..:)
ReplyDeleteಚಂದದ ಬರಹ ... ಒಮ್ಮೆ ನನ್ನ ಬಾಲ್ಯವನ್ನೂ ನೆನಪಿಸಿತು.
ReplyDelete@Suma, Thank u madam.. :)
ReplyDeleteಅಶ್ವಿನಿ,
ReplyDeleteನಿಮ್ಮ ‘ಬಾಲಕಾಂಡ’ ಭಾಳಾ ಸೊಗಸಾಗಿದೆ!
ಬೆಕ್ಕಿನ ಮರಿಗಳನ್ನು ಬೇರೊಂದು ಬೆಕ್ಕು ತಿನ್ನಬಹುದೆಂದು ಗೊತ್ತಿರಲಿಲ್ಲ. ಓದಿ ಆಶ್ಚರ್ಯವಾಯಿತು.
ಚೆನ್ನಾಗಿ ಬರೀತಿದ್ದೀರಿ. Carry on, Ashwini!
ಚೆನ್ನಾಗಿ ಮೂಡಿ ಬಂದಿವೆ ನಿಮ್ಮ ನೆನಪುಗಳು. ಬಹುತೇಕ ನಮ್ಮೆಲ್ಲರ ಬಾಲ್ಯದ ನೆನಪುಗಳು ಹೀಗೇ ಅಲ್ಲವೆ? ಮತ್ತೆಂದೂ ಅವು ವಾಪಸ್ ಬರುವುದಿಲ್ಲ ಎಂಬ ಕಾರಣಕ್ಕೋ ಏನೋ, ಬಾಲ್ಯ ಆಪ್ತವಾಗೇ ಉಳಿದುಬಿಡುತ್ತದೆ. ಅಲ್ಲಿ ನೋವಿದ್ದರೂ ಇವತ್ತು ಅದನ್ನು ನೆನಪಿಸಿಕೊಳ್ಳುವುದು ಒಂಥರಾ ನಲಿವೇ.
ReplyDeleteಬರೀತಾ ಇರಿ ಹೀಗೇ.
@ಸುನಾಥ, ಥ್ಯಾಂಕ್ಯೂ ಸರ್.. :)ಬೇರೆ ಬೆಕ್ಕುಗಳು ಮರಿಗಳನ್ನು ತಿನ್ನುತ್ತಿರಲಿಲ್ಲ, ಮರಿಗಳ ಕತ್ತನ್ನು ಮುರಿದು ಸಾಯಿಸಿ ಹೋಗುತಿದ್ದವು ನಾವು ಅವನ್ನ ಮಣ್ಣು ಮಾಡ್ತಾ ಇದ್ವಿ..:(
ReplyDelete@ಚಾಮರಾಜ, ಥ್ಯಾಂಕ್ಯೂ ಸರ್..:) ನಿಜ ಸರ್ those are very sweet n unforgettable memories which will not be back..
ತುಂಬಾ ಸುಂದರವಾದ ನೆನಪುಗಳು.....ನಿಮ್ಮಣ್ಣ ನಿಜವಾಗಿಯೂ ಕಲಾಕಾರನೆ :D
ReplyDeletehey its really nice............like it most....waiting for ur next blog.....
ReplyDelete@ Hegde & Vijayan, Thank u
ReplyDeletesakattagive ashwini
ReplyDeleteThis comment has been removed by the author.
ReplyDelete