Showing posts with label ಅಶ್ವಿನಿ. Show all posts
Showing posts with label ಅಶ್ವಿನಿ. Show all posts

Monday, February 14, 2011

ಕೋಳಿಕಾಲಿನ ಸಂಕಟಗಳೂ ಮತ್ತು ಅಣ್ಣನ ಬಿರುದೂ...


ಪ್ರತಿದಿನ ಬೆಳಿಗ್ಗೆ 5.30ಕ್ಕೆ ಏಳುವುದು, ಅದೂ ಹನ್ನೊಂದರ ವಯಸ್ಸಿನಲ್ಲಿ  ಅಂದರೆ ಕಷ್ಟವೇ. ಆದರೆ ನವೋದಯಕ್ಕೆ ಹೋದಾಗ ಬೆಳಿಗ್ಗೆ ಏಳುವುದು ನನಗೆ ಹೊಸದು ಎನಿಸಲಿಲ್ಲ.  ಸ್ಕೂಲ್ ಗೆ ಸೇರೊಕು ಮುಂಚೆ ಬೆಳಿಗ್ಗೆದ್ದು 'ಕರಾಟೆ' ಕ್ಲಾಸ್ ಗೆ ಹೋಗ್ತಾ ಇದ್ದೆಆದ್ರೆ ಇಲ್ಲಿ 'ಕರಾಟೆ' ಕ್ಲಾಸ್, ಸ್ವಿಮ್ಮಿಂಗ್ ಇಲ್ಲ ಅಂತ ಗೊತ್ತಾಗಿ, ಅಯ್ಯೊ ನನ್ನ 'ಕರಾಟೆ' ಅಭ್ಯಾಸ 'ಹಳದಿ ಬೆಲ್ಟ್' ಗೆ ಮುಗದೋಯ್ತಲ್ಲ ಅಂತಾ ಬೇಜಾರಾಯ್ತು. ಇನ್ನು ಸ್ವಿಮ್ಮಿಂಗ್ ಪೂಲ್ ನ ಮಾತೇ ಇಲ್ಲ ಬಿಡಿ. ಯಾಕೆಂದ್ರೆ ಬೆಳಗಿನ ಜಾಗಿಂಗ್ ಮುಗಿಸಿ ಓಡಿ ಬಂದು ನಾನು.. ನೀನು... ಅಂತ ಸ್ನಾನಕ್ಕೆ ಬಾತ್ ರೂಮ್ ಗೋಸ್ಕರ ಕಿತ್ತಾಡೋದೇ ಒಂಥರಾ ಮಜಾ, ಒಂಥರಾ ಬೇಜಾರು. ಕೆಳಗಿನಿಂದ ಮೇಲೆ ಬಕೀಟಿನಲ್ಲಿ ನೀರು ತಂದು ಆ ತಣ್ಣೀರನ್ನು ಸ್ನಾನ ಮಾಡುವಾಗ ಕೇಳಬೇಕೇ? ಅದರಲ್ಲೂ ಮೂರೂ ಸೀಸನ್ಗಳಲ್ಲೂ ತಣ್ಣೀರೇ ತಣ್ಣೀರು... ಪ್ರತಿ ದಿನ ಒಬ್ಬೊಬ್ಬರಿಗೂ, ಬಾತ್ರೂಂ, ಟಾಯ್ಲೆಟ್ ಕ್ಲೀನ್, ಕಸ-ನೆಲ ಒರೆಸುವುದು, ಮೆಸ್ನಲ್ಲಿ ಸರ್ವೀಂಗ್ ಡ್ಯೂಟಿ ಕಟ್ಟಿಟ್ಟದ್ದೇ.  ಸ್ವಾವಲಂಬಿ ಹಾಗೂ ಕರ್ತವ್ಯ, ಜವಾಬ್ದಾರಿ ಜೀವನಕ್ಕೆ ಇಷ್ಟೆಲ್ಲ ತಯಾರಿ ಅಂತ ಶಾಲೆಯಿಂದ ಹೊರಬಂದಮೇಲೆ ಅರಿವಾಯ್ತು. ಆದರೆ ಅಲ್ಲೀವರೆಗೆ ಇದೆಲ್ಲ ಪನಿಶ್ಮೆಂಟ್ ಥರ ಅನ್ನಿಸ್ತಿತ್ತು. ಇದೆಲ್ಲಕ್ಕಿಂತ ಮೊದಲು ಅಂದರೆ ಬೆಳಿಗ್ಗೆ 4ರಿಂದ 5ರತನಕ ಎಂ.ಪಿ ( ಮಲ್ಟಿಪರ್ಪಸ್)  ಹಾಲ್ ನಲ್ಲಿ ಸ್ಟಡೀಸ್ ಗೆ ಕರೆದುಕೊಂಡು ಹೋಗುತ್ತಿದ್ದರು.  

ಅವಸರದಲ್ಲಿ ರೆಡಿ ಆಗಿ 7.15ಕ್ಕೆ ಬ್ರೇಕ್ ಫಾಸ್ಟ್ ಗೆ ಹೋದಾಗ ನಮ್ಮ ಪ್ರಿನ್ಸಿ, ಕಣ್ಣಲ್ಲೇ ಎಲ್ಲರ ಅಟೆಂಡನ್ಸ್...! ಸಾಮಾನ್ಯವಾಗಿ ನನ್ನ ’ಬುಧವಾರ’ದ ತಿಂಡಿ ಸ್ಕಿಪ್...! ಬುಧವಾರ ಯಾವ ದೇವರಿಗೆ ಉಪವಾಸ ಇರಬಹುದು ಅನ್ಕೋಳ್ತಿದಿರಾ... ಅಯ್ಯೋ... ನಾನು ಇವತ್ತಿಗೂ ಒಂದು ದಿನವೂ ಯಾವ ದೇವರಿಗೂ, (ಆದರೆ ಸುಮ್ ಸುಮ್ನೆ ಉಪವಾಸಗಳು ಬಹಳಷ್ಟ ಇರ್ತವೆ ಬಿಡಿ) ಉಪವಾಸ ಮಾಡಿದವಳಲ್ಲ... ಬುಧವಾರದ ತಿಂಡಿ ’ಕಾಂಕ್ರೀಟ್’...!!! ನನಗೆ ಇಷ್ಟವಾಗದ ಆ ತಿಂಡಿ ನನ್ನ ಬೆಸ್ಟ್ ಫ್ರೆಂಡ್ ಸಂಗೀತಾಗೆ ಇಷ್ಟ... ನಮ್ಮ ಪ್ರಿನ್ಸಿ ಅಲ್ಲಿಂದಾನೇ ’ಏ ಬೆನಕಟ್ಟಿ ಎಲ್ಲಿ ನಿನ್ನ ಫ್ರೆಂಡ ಆ ’ಕೋಳಿಕಾಲು’.... ’ಸ...ರ್ ಅವಳು... ಅಲ್ಲಿ ನೋಡಿ ಬರ್ತಿದಾಳೆ’ ಅಂತ ಹೇಳಿ ಎಸ್ಕೇಪ್.

ಎಂಟಕ್ಕೆ ಅಸೆಂಬ್ಲಿ, ಸ್ಕೂಲ್ ಲೀಡರ್ ಪ್ರಿನ್ಸಿಪಾಲ್ ಅನ್ನು ಕರೆದುಕೊಂಡು ಬರುವ ಮುಂಚೆ ನಮ್ಮ ಪಿಇ ಮಾಸ್ಟರ್ಸ್ ಯೂನಿಫಾರ್ಮ್ ನೀಟ್ ಆಗಿಲ್ಲ. ಶೂಸ್ ಕೊಳೆ ಅಂತೆಲ್ಲಾ... ಹುಡುಗರಿಗೆ ಹಿಗ್ಗಾ ಮುಗ್ಗಾ ಥಳಿಸುತ್ತಿದ್ದರು. ನಂತರ ಗುಡ್ ಮಾರ್ನಿಂಗ್, ಟುಡೇಸ್- ಕ್ಯಾಲೇಂಡರ್, ಥಾಟ್, ನ್ಯೂಸ್, ಥಾಟ್ ಎಕ್ಸಪ್ಲಿನೇಶನ್ ಇವೆಲ್ಲಾ ಪ್ರತಿಯೊಬ್ಬರಿಗೂ ಕಡ್ಡಾಯವಾಗಿ... ಇದೆಲ್ಲಾ ಆದಮೇಲೆ ನಮ್ಮ ಪ್ರಿನ್ಸಿಪಾಲರ ಮಂಗಳಾರತಿಯನ್ನೊಳಗೊಂಡ ಭಾಷಣ (ಕೆಲವೊಂದು ಸಲ ಮಾತ್ರ). ಆಮೇಲೆ ಒಂದು ಹಾಡು (ದಿನಾಲೂ ಬೇರೆ ಬೇರೆ) ಅವುಗಳಲ್ಲಿ ಅತೀ ದೊಡ್ಡದೆಂದರೆ...

ಹಮ್ ನವಯುಗಕೀ ನಯೀ ಭಾರತೀ ನಯೀ ಆರತಿ
ಹಮ್ ಸ್ವರಾಜ್ಯಕೀ ರಿಚಾನವನ ಭಾರತ ಕೀ ನವ ಲಯ ಹೋ
ನವ ಸೂರ್ಯೋದಯ, ನವ ಚಂದ್ರೋದಯ
ಹಮೀ ನವೋದಯ ಹೋ...

ಒಟ್ಟು ಐದು ಪ್ಯಾರಾಗಳು. ನಂತರ ಪ್ಲೆಡ್ಜ್, ರಾಷ್ಟ್ರಗೀತೆ, ಜೈಹಿಂದ್ ಅನ್ನೋ ಅಷ್ಟರಲ್ಲಿ ದಿನಕ್ಕೆ ಐದಾರು ವಿಕೆಟ್ ಡಮಾರ್! 'ನೀನು ತೆಳ್ಳಗೆ ಇದ್ದೀಯ. ತುಂಬಾ ವೀಕ್' ಅಂತೆಲ್ಲಾ ಹೇಳುತ್ತಿದ್ದರು. ಆದರೆ ಒಂದೂ ದಿನವೂ ಅಸೆಂಬ್ಲಿಯಲ್ಲಿ ತಲೆ ಸುತ್ತಿ ಬೀಳಲಿಲ್ಲ ನಾನು! 

8.30ಕ್ಕೆ ಕ್ಲಾಸಸ್, 11ಕ್ಕೆ ಬಿಸ್ಕಿಟ್ಸ್ ಅಥವಾ ಹಣ್ಣುಗಳ ಬ್ರಂಚ್ ಟೈಮ್, ಮೊದಮೊದಲು ಅಂದರೆ ಹೊಸ ಮೆಸ್ ರೆಡಿಯಾಗುವ ಮೊದಲು 1 .30ಕ್ಕೆ ಹುಡುಗರಿಗೆ ಊಟ, ಹುಡುಗಿಯರಿಗೆ 2ಕ್ಕೆ :(. ಹೊಸ ಮೆಸ್ ತಯಾರಾದ ನಂತರ ಎಲ್ಲರಿಗೂ 1 .30ಕ್ಕೇ. ನಂತರ 3.15ಕ್ಕೆ ಸೂಪರ್ವಿಶನ್ ಕ್ಲಾಸಸ್ (ಪ್ರತಿದಿನ ಒಂದೊಂದು ವಿಷಯದ ಕುರಿತು ಅಭ್ಯಾಸ ಮಾಡುವುದು). 4.50ಕ್ಕೆ ಸ್ನ್ಯಾಕ್ಸ್, ಐದಕ್ಕೆ ಗೇಮ್ಸ್, ಗೇಮ್ಸ್ ವೇಳೆ ಮತ್ತು ಬೆಳಗಿನ ಜಾಗಿಂಗ್ ಸಮಯದಲ್ಲಿ ಲೇಟಾಗಿ ಬಂದವರಿಗೆ ಬೆಂಡೌನ್ ಇದ್ದದ್ದೇ. ಇಲ್ಲಾಂದ್ರೆ ೪೦೦ ಮೀ. ಗ್ರೌಂಡ್ ಅನ್ನು ನಾಲ್ಕು ಸಲ ರೌಂಡ್ ಹಾಕಬೇಕು. ಬೆಳಗಿನ ಜಾಗಿಂಗ್ ಗೆ ಲೇಟ್ ಆದರಂತೂ ಮುಗೀತು ಕತೆ. ನಾಲ್ಕರ ಜೊತೆ ಮತ್ತೂ ನಾಲ್ಕು ರೌಂಡ್ ಓಡಲೇಬೇಕು. ಸಂಜೆ ಏಳಾಗುತ್ತಿದ್ದಂತೆ ನಮಸ್ತೇ ಶಾರದಾ ದೇವಿ.... ಅಂತ ಪ್ರಾರ್ಥನೆ ಮಾಡಿ ಅಭ್ಯಾಸಕ್ಕೆ ಕುಳಿತುಕೊಳ್ಳುತ್ತಿದ್ದೆವು. ಎಂಟಕ್ಕೆ ಊಟ. ಅಷ್ಟೂ..........ದ್ದ ಲೈನ್ ಮುಗಿದು ಆಮೇಲೆ 'ಅನ್ನಪೂರ್ಣೆ ಸದಾಪೂರ್ಣೆ' ಹೇಳೋಷ್ಟೊತ್ತಿಗೆ ತಟ್ಟೆಯೊಳಗಿರೋ ಚಪಾತಿ ತಿನ್ನು ತಿನ್ನು ಬಾ.. ಅಂತ ಕರೆದ ಹಾಗಾಗ್ತಿತ್ತು.  ಅದರಲ್ಲೂ ಕೊನೇ ಟೇಬಲ್ನಲ್ಲೇ ನಾವು ಕೂತ್ಕೊಳ್ಳೋದು. ಹಂಗೂ ಹಿಂಗೂ ಮಾಡಿ ಹೌಸ್ಮದರ್ ಕಣ್ಣು ತಪ್ಪಿಸಿ ;) ಆಗಲೇ ಒಂದು ಚಪಾತಿ ಗುಳುಂ! :)

ಅಷ್ಟೊಂದು ಸ್ಟ್ರಿಕ್ಟ್ ಸ್ಕೂಲ್ನಲ್ಲೂ ಸಿಕ್ಕಾಪಟ್ಟೆ ತರಲೆ ಮಾಡ್ತಿದ್ವಿ. ಯಾಕೆಂದ್ರೆ ಹೌಸ್ಮದರ್ ಕೊಡೋ ಕಷ್ಟ ಕಡಿಮೆ ಮಾಡ್ಕೊಂಡು ರಿಲೀಫಾಗೋದಕ್ಕೆ. ಹಾಗೆ ನೋಡಿದ್ರೆ ನಾನು ಇಲ್ಲಿ ಇದ್ದಾಗ ಕಡಿಮೆ ಮಾತನಾಡುವ ಹುಡುಗಿಯಾಗಿದ್ದೆ. ಆದರೆ ಈಗ ಹಾಗಿಲ್ಲ ಬಿಡಿ, ನಿಲ್ಲಿಸು.... ಅನ್ನೋವರೆಗೂ ಊಂಹೂ. ಆದರೆ ಒಮ್ಮೆ ನಾನು ಟ್ವೆಲ್ತ್ ನಲ್ಲಿದ್ದಾಗ ಬಹಳ ಡಿಪ್ರೆಸ್ ಆಗಿದ್ದೆ ಇದಕ್ಕೆ ಕಾರಣ ಹೌಸ್ ಮದರ್. ಆದರೆ ಆಗ ನನಗೆ ಫುಲ್ ಸಪೋರ್ಟಿವ್ ಆಗಿದ್ದವರು ಶಾಲೆಗೆ ಬಂದಾಗ ನನ್ನ ಕೆನ್ನೆ ಹಿಂಡಿ ಗದರಿದ್ದ ನನ್ನ ಮೆಚ್ಚಿನ ಪ್ರಿನ್ಸಿಪಾಲ್. ನನ್ನ ಪರಿಸ್ಥಿತಿ ಮನಗಂಡು ಕಂಗಾಲಾದ ಅಪ್ಪಾಜಿಗೂ ಪ್ರಿನ್ಸಿ ಫೋನ್ ಮಾಡಿ ಸಮಾಧಾನ ಹೇಳಿದ್ದರು. ಸತತ ಏಳು ವರ್ಷಗಳವರೆಗೂ ಅಪ್ಪಾಜಿ ಪತ್ರದ ಮೂಲಕ ಧೈರ್ಯ, ಏಕಾಗ್ರತೆ, ಗುರಿ ಮುಂತಾದ ಬಗ್ಗೆ ಹೇಳುತ್ತಿದ್ದರು. 

ಆದರೆ ಆಗಿನ ಹಾಗೆ ನಾನಿಲ್ಲ. ಈಗ ಬದಲಾಗಿದ್ದೇನೆ. ಎಂಥ ಡಿಪ್ರೆಸ್ಡ್ ಮೈಂಡ್ಗಳಿಗೂ ಕೌನ್ಸೆಲಿಂಗ್ ಮಾಡಿ ಸಮಾಧಾನ, ಧೈರ್ಯ ಹೇಳಿಬಿಡ್ತಾಳೆ ಅಂತ ಅಕ್ಕ ಅಮ್ಮ ಹೇಳ್ತಿರ್ತಾರೆ . ಹೀಗಾಗಿ ನನ್ನ ಅಣ್ಣ 'ಫ್ರೀ ಅಡ್ವೈಸರಿ ಬಾಕ್ಸ್' ಅಂತ ಬಿರುದು ಕೊಟ್ಟುಬಿಟ್ಟಿದ್ದಾನೆ :) 

ಹೇಳೋದ್ ಮರ್ತಿದ್ದೆ :

ಅಥ್ಲೇಟಿಕ್, ರೀಜನಲ್, ನ್ಯಾಶನಲ್ ಮೀಟ್ ಬಂದ್ರಂತೂ ವೆರೈಟಿ ಸ್ವೀಟ್ಸ್ ಏನೋ ಸಿಗ್ತಿದ್ವು. ಆದರೆ ತಿಂಗಳುಗಟ್ಲೇ ಬೆಳಿಗ್ಗೆ ಮತ್ತು ಸಂಜೆ ಜಾಗಿಂಗ್, ಗೇಮ್ಸ್ ಟೈಮ್ನಲ್ಲಿ ಬರೀಗೈಯಿಂದ ಆ ದೊಡ್ಡ ಗ್ರೌಂಡ್ಅನ್ನು ಕ್ಲೀನ್ ಮಾಡಿದ್ದನ್ನು ನೆನಪಿಸಿಕೊಂಡರೆ ಈಗ್ಲೂ ಕೈ ಚುರುಗುಡ್ತಾವೆ. ಕೈಗೆ ಸಣ್ಣ ಕಲ್ಲು ಚುಚ್ಚಿ ಗಾಯವಾಗುತ್ತಿದ್ದರಿಂದ ಆಗ ನಾವು ಕಟ್ಟಿಗೆ ಮತ್ತು ದೊಡ್ಡ ದೊಡ್ಡ ಕಲ್ಲುಗಳಿಂದ ನೆಲವನ್ನು ಸಮ ಮಾಡಲು ತೊಡಗುತ್ತಿದ್ದೆವು. ಅದನ್ನು ಕಂಡ ನಮ್ಮ ಪಿಇ ಮೇಡಮ್ ಮತ್ತು ಲೀಡರ್ಸ್ ಬೈಯ್ದು ಕೈಯಿಂದಲೇ ಮಾಡಬೇಕು ಅಂತ ಆರ್ಡರ್ ಮಾಡ್ತಿದ್ರು :( ಅಂತೂ ಏಳು ವರ್ಷದಲ್ಲಿ ನಾವೆಲ್ರೂ ಸೇರಿ ೨ ಅಡಿ ಎತ್ತರಕ್ಕಿದ್ದ 
ಗುಡ್ಡವನ್ನು ಗ್ರೌಂಡ್ನ ಸಮಕ್ಕೆ ತಂದಿದ್ದೆವು!  


ಚಿತ್ರಕೃಪೆ: http://www.modthesims.info

Thursday, February 3, 2011

ಇದು ಮೇ ಹುಡುಗಿಯ ಶುರುವಾತ್...




ಅಂದು ಜುಲೈ 5, 1997, ಮಳೆಗಾಲ.  ಸಿಕ್ಕಾಪಟ್ಟೆ ಜೋರಾಗಿ ಮಳೆ ಸುರೀತಿತ್ತು, ಆದ್ರೆ ಸಂಜೆ ೫ ಗಂಟೆಯೊಳಗೆ ಹೋಗ್ಬೇಕಿತ್ತು. ಮಳೆ ಸ್ವಲ್ಪ ಕಡೆಮೆ ಆಗ್ತಿದ್ದಂಗೆ, ಅಪ್ಪಾಜಿ, 'ಅಶ್ವಿನಿ ಬೇಗ ಹೊರಡೋಣ ಬಾ ಲೇಟ್ ಆಯ್ತು’ ಅನ್ನೊವಷ್ಟರಲ್ಲಿ ಮನೆಯಲ್ಲಿ ಎಲ್ಲರಿಗೂ ನಮಸ್ಕಾರ ಮಾಡಿ ಹಿರಿಯರ ಆಶೀರ್ವಾದಗಳೊಂದಿಗೆ ನನ್ನ ಸೂಟ್ಕೇಸ್, ಗಣೇಶ,ಸಾಯಿ ಬಾಬಾ,ಕುಂಕುಮ,ವಿಭೂತಿ ಎಲ್ಲ ಪೂಜಾ ಸರಂಜಾಮುಗಳೊಂದಿಗೆ ಪುಸ್ತಕಗಳನ್ನೊಳಗೊಂಡ ಬ್ಯಾಗ್ ಎತ್ಕೊಂಡು ನಮ್ಮ ಕೈನೆಟಿಕ್ ಹೊಂಡಾ ಮೇಲೆ ಹೊರಟಿದ್ದಾಯ್ತು... ಅಮ್ಮ, ಅಕ್ಕನ ಕಣ್ಣುಗಳು ಹನಿಗೂಡಿದ್ದವು.. ಆದ್ರೆ ನನ್ಗೆ ಸಿಕ್ಕಾಪಟ್ಟೆ ಖುಷಿ ಆಗ್ತಿತ್ತು..! ಅಂತೂ ನಾನು ನನ್ನ ಕನಸಿನ ಶಾಲೆಗೆ ಹೋಗ್ತಿದಿನಿ ಅಂತ.
ಧಾರವಾಡ ನವೋದಯ ವಿದ್ಯಾಲಯದಲ್ಲೇ ಓದ್ಬೇಕು ಅಂತ ಮೂರು ವರ್ಷ ಕಷ್ಟಪಟ್ಟಿದ್ದೆ. ಅಲ್ಲಿಯ ರೂಲ್ಸ್ ಪ್ರಕಾರ ಯಾವ ಜಿಲ್ಲೆಯ ನವೋದಯ ಶಾಲೆ ಸೇರ್ಬೇಕು ಆಂತೇವೋ ಅದೇ ಜಿಲ್ಲೆಯ ಶಾಲೆಯಲ್ಲಿ ಓದಿರ್ಬೇಕು, ಅಂದ್ರೆ ೩-೫ನೇ ಕ್ಲಾಸ್ ತನಕ ಆ ಜಿಲ್ಲೆಯಲ್ಲೇ ಓದಿರಬೇಕು ಹಾಗಾಗಿ, ನಮ್ಮೂರು ಬೆಳಗಾಂ ಜಿಲ್ಲೆಯ ದೊಡ್ಡವಾಡದಿಂದ ಧಾರವಾಡ ಜಿಲ್ಲೆಯ ಉಪ್ಪಿನ-ಬೆಟಗೇರಿಗೆ ಮೂರು ವರ್ಷ ಬಸ್ನಲ್ಲಿ  ಟ್ರಾವೆಲಿಂಗ್ ಮಾಡಿದೆ. ಶಾಲೆ ಮುಗಿದ ಮೇಲೆ ಹೂಗಾರ್ ಸರ್ ಮನೆಗೆ ಟ್ಯೂಶನ್ ಗೆ ಹೋಗ್ತಿದ್ದೆ. ದಿನಾಲು ರಾತ್ರಿ ಮನೆಗೆ ಬರೋದು ೯, ಒಮ್ಮೊಮ್ಮೆ ೧೦!
ಜವಾಹರ ನವೋದಯ ವಿದ್ಯಾಲಯ(Central govt. Residential School affiliated to Delhi) ದ ಗೇಟ್ ಎಂಟರನ್ಸ್ ಗೆ ಸೆಕ್ಯುರಿಟಿ ನಮ್ಮ ಗಾಡಿಯನ್ನ ತಡೆದ... ತಿಂಡಿ ಏನು ತಂದಿಲ್ಲ ತಾನೆ.... ಪ್ರಿನ್ಸಿಪಾಲ್ ತುಂಬ ಸ್ಟ್ರಿಕ್ಟ್ ಅಂತ ಎಚ್ಚರಿಕೆ ಕೊಟ್ಟು, ನೋಡಿ ಸರ್, ಹೀಗೆ ನೇರ ಹೋಗಿ ರೈಟ್ ಟರ್ನ್ ಮಾಡಿ  ಫಸ್ಟ್ ರೈಟ್ ಹೋಗಿ ಅಲ್ಲಿ ಈ ನ್ಯೂ ಕಮರ್ ಮಕ್ಕಳನ್ನು ’ಹೌಸ್ ಮದರ್’ ರಿಜಿಸ್ಟರ್ ಮಾಡ್ಕೊಳ್ತಾ  ಇರ್ತಾರೆ, ಭೇಟಿ ಮಾಡಿ ಅಂದ. ಅಲ್ಲಿಯ ವಾತಾವರಣ, ಡಾರ್ಮೇಟ್ರಿ ಗ್ರಿಲ್ಲ್ಸ್, ವಾರ್ಡನ್ ನೋಡಿ ನಂಗೆ ಯಾಕೋ ಸಿನೇಮಾಗಳಲ್ಲಿ ನೋಡಿದ ಜೈಲು ನೆನಪಾಗ್ತಿತ್ತು...! ಎಲ್ಲ ಫಾರ್ಮ್ಯಾಲಿಟೀಸ್ ಮುಗಿಸಿ ಅಪ್ಪಾಜಿ ನನ್ನ ಕೆನ್ನೆಗೆ ಮುತ್ತಿಟ್ಟು ಚೆನ್ನಾಗಿ ಓದು ಮಗಳೆ ಏನಾದ್ರು ಬೇಕಿದ್ರೆ ಪತ್ರ ಬರಿ, ಮುಂದಿನ ತಿಂಗಳು ಫಸ್ಟ್ ಸಂಡೆ ಬರ್ತೀವಿ ಅಂತ ಹೊರಟೇ ಬಿಟ್ರು...
 ಗಂಟಲು ಬಿಗಿಗೊಂಡಿತ್ತು.. ನಾನು ಯಾವತ್ತು ಅಮ್ಮ-ಅಪ್ಪಾಜಿಯರನ್ನು ಬಿಟ್ಟು ಇದ್ದವಳೇ ಅಲ್ಲ (ಓವರ್ ಅಟ್ಯಾಚ್ಮೆಂಟ್)...  ಸಂಜೆ ೬.೩೦, ಆಚೆ ನಿಂತು ಅಳ್ತಾ ಇದ್ದೆ... ನನ್ನ ಸೀನಿಯರ್ ಬಂದು ’ಬಾ ಪುಟ್ಟಿ ಅಳಬಾರ್ದು ನಾವೆಲ್ಲ ಇದೀವಿ’ ಅಂತ ಸಮಾಧಾನ ಮಾಡಿ ಒಳಗೆ ಕರೆದುಕೊಂಡು ಹೋದ್ಲು. ಸಂಜೆ ೭.೧೫, ’ಹೌಸ್ ಮದರ್’ ಬಂದ್ರು... ಎಲ್ಲ ರೂಲ್ಸ್ ಹೇಳ್ತಾ ಹೇಳ್ತಾ ಅದೊಂದು ದೊಡ್ಡ ಪಟ್ಟೀನೇ ಆಯ್ತು... ನನ್ನ ಪರ್ಮಿಶನ್ ಇಲ್ದೆ ಯಾರು ಗ್ರಿಲ್ನಿಂದ ಆಚೆ ಬರೊ ಹಾಗಿಲ್ಲ, ತಿಂಡಿ,ಚಾಕೊಲೆಟ್ಸ್,ಬಿಸ್ಕತ್ಸ್ ಇಟ್ಕೊಳೋ ಹಾಗಿಲ್ಲ, ಒಬ್ಬೊಬ್ರೆ ಓಡಾಡೊ ಹಾಗಿಲ್ಲ, ಎಲ್ಲರೂ ಒಟ್ಟಿಗೆ ಲೈನ್ ನ್ನಲ್ಲಿ ಹೋಗ್ಬೇಕು ಅದು ಇದು ಅಂತ ನೂರೆಂಟು...! 
ಅಂತೂ ಹೊಸ ಲೈಫ್ ಶುರು ಆಯ್ತು... ಹೊಸ ನೆಪಗಳೂ ಶುರು ಆದವು ಮೊದಲನೇ ಪತ್ರದೊಂದಿಗೆ...
 “ ಪ್ರೀತಿಯ ಅಪ್ಪಾಜಿ-ಮಮ್ಮಿ, ನೀವೆಲ್ಲ ಚೆನ್ನಾಗಿರಬಹುದು. ನಾನು ಇಲ್ಲಿ ಚೆನ್ನಾಗಿಲ್ಲ, ನನಗೆ ನಿಮ್ಮ ನೆನಪು ಸದಾ ಕಾಡುತ್ತಿದೆ ನಿಮ್ಮನ್ನು ಬಿಟ್ಟು ನಾನು ಇರುವುದಿಲ್ಲ, ನನಗೆ ಇಲ್ಲಿ ’ಪಂಜರದಲ್ಲಿ ಪಕ್ಷಿಯನ್ನ’ ಕೂಡಿಟ್ಟ ಹಾಗೆ ಅನಿಸುತ್ತಿದೆ. ಇಲ್ಲಿ ಸೊಳ್ಳೆಗಳು ತುಂಬ ಇವೆ, ಛಳಿ ಜಾಸ್ತಿ, ಗಾಳಿಯ ಸುಯ್ ಸುಯ್ ಶಬ್ದ  ನನಗೆ ಬಹಳ ಭಯವಾಗತ್ತೆ. ದಯವಿಟ್ಟು ನನ್ನನ್ನು ಕರೆದುಕೊಂಡು ಹೋಗಿ... ಇಂತಿ ನಿಮ್ಮ ಪ್ರೀತಿಯ ಹಾಗೂ ಅಳುತ್ತಿರುವ:’( -ಮಗಳು”. 
ಮರುದಿನವೇ ಪೋಸ್ಟ್ ಮಾಡಿಬಿಟ್ಟೆ. ೪ ದಿನಗಳಾದ್ರೂ ಮನೆಯಿಂದ ಯಾರ ಸುಳಿವೂ ಇಲ್ಲ... (ಅಪ್ಪಾಜಿ ಡಿ.ಲಿಟ್ ರಿಸರ್ಚ್ ವರ್ಕನಲ್ಲಿ ಬಿಜಿ)..... ಒಂದು ದಿನ ಸಂಜೆ ಗೇಮ್ಸ್ ಮುಗಿಸಿ ಬರೋವಾಗ ಗೇಟ್ ಹತ್ತಿರ ನೋಡಿದೆ... ಓಡಿ ಹೋಗಿ ಬಿಡ್ಲಾ... ಮತ್ತೆ ಯೋಚಿಸಿ ಛೆ.. ಬೇಡ ಅಂತ ಸೀದಾ ಪ್ರಿನ್ಸಿಪಾಲ್ ಮನೆಗೇ ಹೆಜ್ಜೆ ಇಟ್ಟೆ... ಸರ್... ಸರ್... ’ಬಾ ಮಗು ಏನು ವಿಷಯ’... ’ ಸರ್, ನಾನು ಮನೆಗೆ ಹೋಗ್ಬೇಕು ದಯವಿಟ್ಟು ನನ್ನನ್ನು ಆಚೆ ಬಿಟ್ಟು ಬಿಡಿ’ ಅಂತ ಹೇಳ್ತಿದ್ದಂಗೆನೇ ನಮ್ಮ ಪ್ರಿನ್ಸಿಪಾಲ್ ಕೋಪ ನೆತ್ತಿಗೆ ಏರಿ ’ ಚೋಟುದ್ದ ಇಲ್ಲ ನೀನು, ಬಂದು ವಾರ ಕೂಡ ಆಗಿಲ್ಲ ಎಷ್ಟು ಧೈರ್ಯ ನಿನಗೆ ಹಾಗೆ ಕೇಳೋಕೆ’ ಅಂತ ನನ್ನ ಎರಡ  ಕೆನ್ನೆಗಳನ್ನು ಹಿಂಡಿ, ಕಣ್ಣಗಲಿಸಿ ಬೈದು ಕಳಿಸಿಬಿಟ್ಟಿದ್ರು. ಬಹುಶಃ ಆ ನಮ್ಮ ಪ್ರಿನ್ಸಿ ಮನೆಗೆ ಹೋಗುವ ಧೈರ್ಯ ಮಾಡಿದ್ದು ನಾನೇ ಮೋದ್ಲು ಅನ್ಸತ್ತೆ...! ಆಮೇಲೆ ಆ ಧೈರ್ಯ ಮಾಡ್ಲೇ ಇಲ್ಲ ಬಿಡಿ... ಆದರೂ ’ಅಳುವ ಅಶ್ವಿನಿ’ ಅಂತ ಫೇಮಸ್ ಆಗ್ಬಿಟ್ಟಿದ್ದೆ...
ನಮ್ಮ ವಿದ್ಯಾಲಯದಲ್ಲಿ ಸ್ಟಡೀಸ್, ಸ್ಪೋರ್ಟ್ಸ್ ಗಳೊಂದಿಗೆ CCA (Co-curricular Activities) ಕೂಡ ನಡೀತಿತ್ತು. ನಾನು ಅಲ್ಲಿ ಸೇರಿದ ಮೇಲೆ  ಫಸ್ಟ್ ಆಕ್ಟಿವಿಟಿ ಎಲ್ಲ ೬ನೇ ಕ್ಲಾಸ್ ನವರಿಗೂ ‘Hindi calligraphy competition’ ಇತ್ತು. ಆಗ ನನ್ಗೆ ಫ಼ಸ್ಟ್ ಪ್ಲೇಸ್ ಬಂದಿದ್ದು ಕೇಳಿ ತುಂಬಾ ಖುಶಿ ಆಗಿತ್ತು... ಹೀಗೆ ಎಲ್ಲ ಒಕೆಶ್ನಲ್ ಅನುಗುಣವಾಗಿ ಇಂಟರ್ ಹೌಸ್ ಸಿಂಗಿಂಗ್, ಡಾನ್ಸ್, ಸ್ಕಿಟ್ಸ್, ಫ್ಯಾನ್ಸಿ ಡ್ರೆಸ್, ಡ್ರಾಯಿಂಗ್... ಇತ್ಯಾದಿ ಕಾಂಪಿಟಿಶನ್ಸ್ ಕಂಡಕ್ಟ್ ಮಾಡ್ತಿದ್ರು.
 ಆಗ  ಮೊದಲನೆ ಹಬ್ಬ ’ಪಂಚಮಿ ಹಬ್ಬ’ ಹಾಗಾಗಿ ಜನಪದ ಗೀತೆಗಳ ಸ್ಪರ್ಧೆ ಇತ್ತು. ಎಲ್ಲರ ತಯಾರಿ ಭರ್ಜರಿಯಾಗಿ ನಡೆದಿತ್ತು... ಜ್ಯೂನಿಯರ್ ಸೆಕ್ಶನ್ (೬-೮) ನಮ್ಮ ಉಜ್ಜಯನಿ ಹೌಸ್ (ಕಂಚಿ,ನಲಂದ,ಉಜ್ಜಯನಿ) ನಲ್ಲಿ ಇಬ್ಬರು ರೆಡಿ ಇದ್ದರು ಮೂರನೇ ಪಾರ್ಟಿಸಿಪೆಂಟ್ ಗೆ ನಮ್ಮ ಹೌಸ್ ಲೀಡರ್ ಹಾಗೂ ಹೌಸ್ ಮಾಸ್ಟರ್ ಹುಡುಕಾಡ್ತಿದ್ರು... ಆಮೇಲೆ ಹೌಸ್ ಲೀಡರ್ ನೇತ್ರ ಅಕ್ಕ ’ ಅಪ್ಪಿ 6th std ನಲ್ಲಿ ಯಾರಾದ್ರು ಹಾಡ್ತೀರಾ...’ ಅಂತ ಕೇಳಿದ್ರೂ ನಾನು ಸುಮ್ನೇ ಇದ್ದೆ (ಸ್ವಲ್ಪ ರಿಸರ್ವ ಪಾರ್ಟಿ) ಒಬ್ಬೊಬ್ರನ್ನೆ ಹಾಡಿಸುವಾಗ ನನ್ನ ಸರದಿ ಬಂತು.. ಮೆದು ದನಿಯಲ್ಲಿ ’ಮಾಯದಂತ ಮಳೆ ಬಂತಣ್ಣ’ ಹಾಡು ಹೇಳಿದ್ದೇ ತಡ ನೇತ್ರ ಅಕ್ಕ ನನ್ನ ಮುದ್ದಾಡಿ ’ನೋಡು ಪುಟ್ಟಿ ನೀನು ತುಂಬ ಚೆನ್ನಾಗಿ ಹಾಡ್ತಿಯ, ಚೆನ್ನಾಗಿ ಪ್ರ್ಯಾಕ್ಟೀಸ್ ಮಾಡು ಆ ನಲಂದ ಹೌಸ್ ದೀಪಗೆ ನೀನೇ ಒಳ್ಳೇ ಕಾಂಪಿಟಿಟರ್, ಆಲ್ ದ ಬೆಸ್ಟ್ ಅಂತ ಹೇಳಿ ಆಮೇಲೆ ಎಲ್ಲ ನಮ್ ನಮ್ ಪ್ಲೇಸ್ಗಳಿಗೆ ಹೋದೆವು. ಕಾಂಪಿಟೇಶನ್ ಡೇ ಬಂದೇ ಬೀಡ್ತು... ನನ್ನ ಹೆಸರೂ ಕೂಗಿದ್ರು...  ಅಪ್ಪಾಜಿ ನಾನು ನವೋದಯಕ್ಕೆ ಸೆಲೆಕ್ಶನ್ ಆಗಿರೋ ಖುಶಿಗೆ ಕೊಡಿಸಿದ್ದ ಲೆಮನ್ ಯಲ್ಲೊ ಕಲರ್ ಫ್ರಿಲ್  ಫ್ರಾಕ್ ಹಾಕ್ಕೊಂಡು ನನ್ನ ಇಷ್ಟವಾದ ಮಾಯದಂತ ಮಳೆ ಬಂತಣ್ಣ ಹಾಡನ್ನು ಅತೀ ಎತ್ತರದ ಧ್ವನಿಯಲ್ಲಿ ಹಾಡಿದ್ದನ್ನು ಕೇಳಿ ನನ್ನ ಕೆನ್ನೆ ಹಿಂಡಿದ ನಮ್ಮ ಪ್ರಿನ್ಸಿ ಆಶ್ಚರ್ಯದಿಂದ,ಖುಶಿಯಿಂದ ನೋಡ್ಥಿದ್ರು...
 ಎಲ್ಲ ಪಾರ್ಟಿಸಿಪೆಂಟ್ಸ್ ಮುಗಿದ್ರು. ರಿಸಲ್ಟ್ ಹೇಳೆ ಬಿಟ್ರು... ಫ಼ಸ್ಟ್ ಪ್ಲೇಸ್ ಗೋಸ್ ಟು ಉಜ್ಜಯನಿ ಹೌಸ್ ಅಶ್ವಿನಿ... ಅಂತೂ ನಲಂದ ಹೌಸ್ ದೀಪನ್ನ ಸೋಲ್ಸಿರೋ ಖುಶಿ ಎಲ್ಲರಿಗೂ ಆಶ್ಚರ್ಯ ತಂದಿತ್ತು... ಅವತ್ತಿನಿಂದ ’ಅಳುವ ಅಶ್ವಿನಿ’, ’ಹಾಡುವ ಅಶ್ವಿನಿ ಅಂತ ಆ ವಿದ್ಯಾಲಯದಲ್ಲಿ ಫೇಮಸ್ ಆದ್ಲು...!
ನನ್ನ ಅಕ್ಕ (ಹಿಂದೂಸ್ತಾನಿ ಗಾಯಕಿ)ನ ತಂಗಿಯಾಗಿದ್ದಕ್ಕೆ ಸಾರ್ಥಕ ಅನ್ಸಿತ್ತು, ಆದ್ರೆ ಒಂದು ದಿನವೂ ಅವಳ ಜೊತೆ ಕೂತ್ಕೊಂಡು ಹಾಡು ಹೇಳಿಸಿಕೊಳ್ಳಲೇ ಇಲ್ಲ....! ಇಂದಿಗೂ ಇಲ್ಲ....!

ಹೇಳೋದ್ ಮರ್ತಿದ್ದೆ:
ರೆಸಿಡೆನ್ಶಿಯಲ್ ಸ್ಕೂಲ್ ಅಂದ್ರೆ ಗೊತ್ತೇ ಇರ್ಲಿಲ್ಲ... ತಿಂಗಳಿಗೊಮ್ಮೇ ಪೇರೆಂಟ್ಸ್ ಮೀಟ್ ಮಾಡೋದು, ಬೇಸಿಗೆ, ಚಳಿಗಾಲದ ರಜೆಗಷ್ಟೇ ಮನೆಗೆ ಹೋಗೋದು ಅಂತ :( . ಬೇಕಾದಾಗ ಮನೆಗೆ ಹೋಗಿ ಬರಬಹುದು ಅನ್ಕೊಂಡಿದ್ದೆ. ಈ ಬಗ್ಗೆ ಅಪ್ಪಾಜಿನೂ  ನನಗೆ ಹೇಳಿರ್ಲಿಲ್ಲ. ನಾನು ಅನ್ಕೊಂಡಿದ್ದೇ ಸತ್ಯ ಅನ್ಕೊಂಡು ಮೆರಿಟ್ ಸೀಟನ್ನಷ್ಟೇ ಟಾರ್ಗೇಟ್ ಮಾಡ್ಕೊಂಡಿದ್ದೆ.

(ಮುಂದುವರಿಸಬೇಕಾ...?)


ಚಿತ್ರ ಕೃಪೆ: vectorstock